ಸಾಮಾನ್ಯ ವರ್ಗಕ್ಕೆ 5.50, ಪರಿಶಿಷ್ಟರಿಗೆ 5 ಲಕ್ಷ ರೂ.ಗೆ ಮನೆ

ಬೆಂಗಳೂರು, ಸೆ.28(ಕೆಎಂಶಿ)-ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಅಗ್ಗದ ದರದಲ್ಲಿ ಮನೆ ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಐದೂವರೆ ಲಕ್ಷ ರೂಗಳಿಗೆ ಒಂದು ಮನೆ ಒದಗಿಸಲಾಗುವುದು ಎಂದರು.

ಇದೇ ರೀತಿ ಪರಿಶಿಷ್ಟರಿಗೆ ಐದು ಲಕ್ಷ ರೂ ದರದಲ್ಲಿ ಮನೆ ಒದಗಿಸಲಾಗುವುದು ಎಂದ ಅವರು, ಈ ಯೋಜನೆಯಡಿ ಈಗಾಗಲೇ ನಲವತ್ತಾರು ಸಾವಿರ ಮನೆಗಳ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು. ಫಲಾನುಭವಿಗಳು ಒಂದು ಲಕ್ಷ ರೂಪಾಯಿ ಠೇವಣಿ ಮೊತ್ತ ಕಟ್ಟಿದರೆ ಸಾಕು ಎಂದ ಅವರು, ಬಾಕಿ ಹಣ ಪಾವತಿಸಲು ಅನುಕೂಲವಾಗುವಂತೆ ಬ್ಯಾಂಕುಗಳಿಂದ ಸರ್ಕಾರವೇ ಸಾಲ ಕೊಡಿಸಲಿದೆ ಎಂದು ವಿ.ಸೋಮಣ್ಣ ವಿವರಿಸಿದರು.

ಹೀಗೆ ಪಡೆದ ಸಾಲಕ್ಕೆ ಏಳು ನೂರು ರೂಪಾಯಿಗಳ ಮಾಸಿಕ ಕಂತನ್ನು ಪಾವತಿಸಿದರೆ ಸಾಕು ಎಂದ ಅವರು,ಫಲಾನುಭವಿಗಳು ಮನೆಗೆ ವಾಸಕ್ಕೆ ಹೋಗುವವರೆಗೂ ಈ  ಸಾಲದ ಮೇಲಿನ ಬಡ್ಡಿಯನ್ನು ಸರಕಾರವೇ ಪಾವತಿ ಮಾಡಲಿದೆ ಎಂದರು. ರಾಜಧಾನಿ ಯಲ್ಲಿ ನಿರ್ಮಿಸುತ್ತಿರುವ ಈ ಒಂದು ಲಕ್ಷ ಮನೆಗಳ ಪೈಕಿ ನಲವತ್ತಾರು ಸಾವಿರ ಮನೆಗಳು ಮುಕ್ತಾಯ ಹಂತದಲ್ಲಿದ್ದು ಉಳಿದಂತೆ ಐವತ್ತಾರು ಸಾವಿರ ಮನೆಗಳ ನಿರ್ಮಾ ಣಕ್ಕೆ ಅಗತ್ಯವಾದ ಕೆಲಸ ಆರಂಭವಾಗಿದೆ ಎಂದು ಹೇಳಿದರು. ಬಾಕಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಪೂರಕವಾಗಿ ಜಾಗದಿಂದ ಹಿಡಿದು ಎಲ್ಲ ಅಗತ್ಯಗಳನ್ನು ಪೂರೈಸಲು ತಯಾರಿ ನಡೆದಿದೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.