85 ವರ್ಷ ಜೀವನ ಅನುಭವಿಸಿದ್ದೇನೆ, ಸಾಕು: ಬೇರೆ ರೋಗಿಗೆ ಬೆಡ್ ಬಿಟ್ಟುಕೊಟ್ಟ ಹಿರಿಜೀವ

ನಾಗ್ಪುರ, ಏ.28- `ನನಗೀಗ 85 ವರ್ಷ. ಜೀವನವನ್ನು ಪೂರ್ತಿ ನೋಡಿ ಅನುಭವಿಸಿದ್ದೇನೆ. ಅಷ್ಟು ಸಾಕು. ಆದರೆ, ಆ ಮಹಿಳೆಯ ಪತಿ ಸತ್ತರೆ ಅವರ ಮಕ್ಕಳು ಅನಾಥರಾಗುತ್ತಾರೆ. ಅವರ ಜೀವ ಉಳಿ ಸುವುದು ನನ್ನ ಕರ್ತವ್ಯ’…

ಹೀಗೆಂದ 85ರ ವೃದ್ಧ, ಅದೇ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯದ ಹಾಸಿಗೆಗಾಗಿ ಕಾಯುತ್ತಾ ನರಳುತ್ತಿದ್ದ ಮಧ್ಯವಯಸ್ಕ, ಕೊರೊನಾ ಸೋಂಕಿತನಿಗೆ ತಮ್ಮ ಹಾಸಿಗೆ ಬಿಟ್ಟುಕೊಟ್ಟಿದ್ದಾರೆ. ಬಳಿಕ ಮನೆಗೆ ಮರಳಿದ್ದಾರೆ. ಅದಾದ ಮೂರು ದಿನಗಳ ಬಳಿಕ ಆ ಹಿರಿಯ ಜೀವ ಜೀವಬಿಟ್ಟಿದೆ. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಆರ್‍ಎಸ್‍ಎಸ್ ಸ್ವಯಂಸೇವಕರಾಗಿದ್ದ ನಾರಾಯಣ ಭಾವುರಾವ್ ದಾಭಾಡ್ಕರ್ ಅವರಿಗೆ ಇತ್ತೀಚೆಗೆ ಕೋವಿಡ್ ಸೋಂಕು ತಗುಲಿತ್ತು. ಅವರನ್ನು ನಾಗ್ಪುರದ ಇಂದಿರಾ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ವ್ಯಾಪಕವಾಗಿ ರುವ ಈ ಸಂದರ್ಭ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ಕೊರತೆ ತೀವ್ರವಾಗಿದೆ. ನಾರಾಯಣ ಅವರಿಗೂ ಸುಲಭದಲ್ಲಿ ಆಸ್ಪತ್ರೆಯಲ್ಲಿ ಹಾಸಿಗೆ ದೊರೆ ತಿರಲಿಲ್ಲ. ಹಲವು ಪ್ರಯತ್ನಗಳ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅದೇ ಸಂದರ್ಭ, 40 ವರ್ಷ ವಯಸ್ಸಿನ ಮಹಿಳೆಯೊಬ್ಬರು ತಮ್ಮ ಪತಿಗೆ ಹಾಸಿಗೆ ದೊರೆಯದೆ ಕಂಗಾಲಾಗಿ ಕಣ್ಣೀರು ಹಾಕುತ್ತಾ ಇರುವುದು ನಾರಾಯಣ ಅವರ ಗಮನಕ್ಕೆ ಬಂತು. ಮರುಕಪಟ್ಟ ಅವರು, ಕೂಡಲೇ ತನ್ನ ಹಾಸಿಗೆಯನ್ನು ಮಹಿಳೆಯ ಪತಿಗೆ ಬಿಟ್ಟುಕೊಡಲು ಮುಂದಾದರು.
ಆಸ್ಪತ್ರೆ ಸಿಬ್ಬಂದಿಯನ್ನು ಕರೆದು, `ನನಗೀಗ 85 ವರ್ಷ. ಜೀವನ ಅನುಭವಿಸಿದ್ದೇನೆ. ಯುವ ಜೀವವೊಂದನ್ನು ರಕ್ಷಿಸುವುದು ಅತಿ ಮುಖ್ಯ. ಅವರ ಮಕ್ಕಳು ಇನ್ನೂ ಚಿಕ್ಕವರು. ನನ್ನ ಹಾಸಿಗೆಯನ್ನು ಅವರಿಗೆ ಕೊಟ್ಟುಕೊಡಿ’ ಎಂದು ಹೇಳಿದರು. ಅಷ್ಟೇ ಅಲ್ಲ, ಆಸ್ಪತ್ರೆ ಆಡಳಿತದ ಕೋರಿಕೆಯಂತೆ `ನನಗೆ ನೀಡಿದ್ದ ಹಾಸಿಗೆಯನ್ನು ಸ್ವ ಇಚ್ಛೆಯಿಂದ ಮತ್ತೊಬ್ಬ ಸೋಂಕಿತರಿಗೆ ಬಿಟ್ಟುಕೊಡುತ್ತಿದ್ದೇನೆ’ ಎಂದು ಪತ್ರ ಬರೆದುಕೊಟ್ಟರು. ಬಳಿಕ ಆಸ್ಪತ್ರೆಯಿಂದ ನೇರ ಮನೆಗೆ ಹೊರಟುಬಿಟ್ಟರು. ಕೆಲವು ಗಂಟೆಗಳಲ್ಲಿ ಅವರನ್ನು ಮನೆಗೆ ಕರೆದೊಯ್ಯಲಾಯಿತು.

ನಾರಾಯಣ ದಾಭಾಡ್ಕರ್ ಅವರ ನಿಧನಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿಸಿದ್ದು, ಹಿರಿಯರ ಮಹತ್ಕಾರ್ಯವನ್ನು ಶ್ಲಾಘಿಸಿ ದ್ದಾರೆ. `ಇನ್ನೊಬ್ಬ ವ್ಯಕ್ತಿಯ ಪ್ರಾಣ ರಕ್ಷಿಸಿದ ನಾರಾಯಣ್ ಜಿ ನಂತರದ 3 ದಿನಗಳಲ್ಲಿ ಪ್ರಪಂಚದಿಂದಲೇ ನಿರ್ಗಮಿಸಿದರು. ಸಮಾಜ ಮತ್ತು ರಾಷ್ಟ್ರದ ನಿಜವಾದ ಸೇವಕರು ಮಾತ್ರ ಇಂತಹ ತ್ಯಾಗ ಮಾಡಲು ಸಾಧ್ಯ. ನಿಮ್ಮ ಸೇವೆಗೆ ನಮಸ್ಕರಿಸುವೆ. ನೀವು ಸಮಾಜಕ್ಕೆ ಸ್ಫೂರ್ತಿ. ದೈವಕ್ಕೆ ವಿನಮ್ರ ಗೌರವ. ಓಂ ಶಾಂತಿ ಎಂದು ಉಲ್ಲೇಖಿಸಿದ್ದಾರೆ.