ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆ

ಬೆಂಗಳೂರು, ನ.22- ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆಗೆ ಸಿದ್ಧತೆ ಪ್ರಾರಂಭವಾಗಿದ್ದು, ಅದ ಕ್ಕಾಗಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ. ನಾಡಿನ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಸಮಿತಿ ರಚನೆಯಾಗ ಲಿದೆ. ನೈತಿಕ ಶಿಕ್ಷಣದ ಪಠ್ಯ ಹೇಗೆ ಇರಬೇಕು ಎಂಬ ಬಗ್ಗೆ ಶ್ರೀಗಳು ಪಠ್ಯ ಸಿದ್ಧ ಮಾಡಲಿದ್ದಾರೆ. ನೈತಿಕ ಶಿಕ್ಷಣದ ಪಠ್ಯ ಸಿದ್ಧತೆಗೆ ನಾಡಿನ ಶ್ರೇಷ್ಠ ಸ್ವಾಮೀಜಿಗಳಿಗೆ ಜವಾಬ್ದಾರಿ ನೀಡಲು ಸರ್ಕಾರದ ಚಿಂತನೆ ನಡೆಸಿದೆ. ಸುತ್ತೂರು, ಆದಿಚುಂಚನಗಿರಿ, ಸಿದ್ದಗಂಗಾ ಶ್ರೀಗಳು ಸಮಿತಿಯಲ್ಲಿ ಇರಲಿದ್ದಾರೆ. ಸಮಿತಿ ರಚನೆ ಬಗ್ಗೆ ಶಿಕ್ಷಣ ಇಲಾಖೆ ಧರ್ಮಗುರುಗಳು, ಶ್ರೀಗಳೊಂದಿಗೆ ಪ್ರಾಥಮಿಕ ಹಂತದ ಚರ್ಚೆ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಶ್ರೀಗಳ ನೇತೃತ್ವದಲ್ಲಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆ ಆಗಲಿದೆ.

ಈ ಸಮಿತಿ ನೈತಿಕ ಶಿಕ್ಷಣ ಪಠ್ಯ ಹೇಗಿರಬೇಕು ಎಂದು ನಿರ್ಧಾರ ಮಾಡಲಿದೆ. ಯಾವ ಪಠ್ಯ ಸೇರ್ಪಡೆ ಮಾಡಬೇಕು, ಯಾರ ಪಠ್ಯ ಸೇರ್ಪಡೆ ಮಾಡಬೇಕು ಎಂಬುದನ್ನು ನಿರ್ಧರಿಸಲಿದೆ. ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿದಂತೆ ಯಾವ-ಯಾವ ಮಹಾ ದಾರ್ಶನಿಕ ಗ್ರಂಥಗಳು ಪಠ್ಯದಲ್ಲಿ ಸೇರ್ಪಡೆ ಮಾಡಬೇಕು ಅಂತಾ ಸಮಿತಿ ನಿರ್ಧಾರ ಮಾಡಲಿದೆ. ಪಂಚತಂತ್ರ ಕಥೆಗಳು, ದಾರ್ಶನಿಕರ ಜೀವನ ಚರಿತ್ರೆ, ಅವರು ಆಚರಿಸಿಕೊಂಡು ಬಂದ ನೈತಿಕ ಮೌಲ್ಯಗಳ ಕುರಿತು ಪಠ್ಯ ರಚನೆ ಯಾಗಲಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ರೂಪಿಸಿಕೊಳ್ಳಲು ಅಗತ್ಯವಾದ ಮೌಲ್ಯಾಧಾರಿತ ನೀತಿಕಥೆಗಳನ್ನ ಪಠ್ಯದಲ್ಲಿ ಸೇರ್ಪಡೆ ಮಾಡುವುದು. ಗುರು-ಹಿರಿಯ ಭಕ್ತಿ, ಸಂಸ್ಕಾರ, ಆಚಾರ- ವಿಚಾರಗಳು, ಸತ್ಯ, ಶಾಂತಿ, ಪ್ರೀತಿ ವಿಶ್ವಾಸಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳುವ ಕಥೆಗಳು, ವ್ಯಕ್ತಿಗಳ ಜೀವನಾಧಾರಿತ ಪಠ್ಯಗಳ ಸೇರ್ಪಡೆಗೆ ಸಮಿತಿ ಅಗತ್ಯವಾದ ಕ್ರಮ ಕೈಗೊಳ್ಳಲಿದೆ.