ವಿಧಾನಸಭಾ ಚುನಾವಣೆಗೆ ಮುನ್ನ ಅಕ್ರಮ ಸಕ್ರಮ

ಬೆಂಗಳೂರು, ಆ.1(ಕೆಎಂಶಿ)-ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿ ಕೊಂಡಿರುವ 12 ಲಕ್ಷ ಬಡವರ ಮನೆಗಳನ್ನು ದಂಡ ಕಟ್ಟಿಸಿಕೊಂಡು ಸಕ್ರಮಗೊಳಿಸು ವುದಾಗಿ ಕಂದಾಯ ಸಚಿವ ಆರ್. ಅಶೋಕ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣಗೊಂಡಿರುವ ಮನೆಗಳನ್ನೂ ಸಕ್ರಮಗೊಳಿಸಲಾಗುವುದು. ಇದರಿಂದ ರಾಜ್ಯ ಸರ್ಕಾರಕ್ಕೆ 20 ಸಾವಿರ ಕೋಟಿ ರೂ. ವರಮಾನ ಬರಲಿದೆ ಎಂದರು. ಒಂದು ಬಾರಿಗೆ ಅನ್ವಯವಾಗುವಂತೆ ಇಂತಹ ನಿರ್ಧಾರ ಕೈಗೊಳ್ಳುವು ದರಿಂದ ಜನರಿಗೂ ನೆಮ್ಮದಿ, ಸರ್ಕಾರಕ್ಕೂ ಆದಾಯ ತಂದು ಕೊಡಲಿದೆ. 40×60 ಚದರಡಿ ವಿಸ್ತೀರ್ಣಕ್ಕಿಂತ ಹೆಚ್ಚಿನ ಭಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ, ಅಂತಹವುಗಳನ್ನು ಸಕ್ರಮಗೊಳಿಸು ವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸರ್ಕಾರ ನಿಗದಿ ಮಾಡಿ ರುವ ವಿಸ್ತೀರ್ಣದಲ್ಲೇ ಶೇ.90ರಷ್ಟು ಮಂದಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದರು.

ಮನೆಗಳನ್ನು ಸಕ್ರಮಗೊಳಿಸಿದ ನಂತರ ಇನ್ನು ಮುಂದೆ ರಾಜ್ಯದಲ್ಲಿ ಎ-ಖಾತಾ, ಬಿ-ಖಾತಾ ಎಂಬ ಪದವೇ ಇರುವುದಿಲ್ಲ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿ ರುವ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಈ ಹಿಂದೆಯೇ ನಿರ್ಧಾರ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ, ಕೇಂದ್ರ ಸಚಿವರಾಗಿರುವ ರಾಜೀವ್ ಚಂದ್ರಶೇಖರ್ ಅವರ ಬೆಂಗಳೂರು ಫೌಂಡೇಷನ್ ಹಾಗೂ ಮಂಗಳೂರಿನ ಸಂಸ್ಥೆಯೊಂದು ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಸ್ಥೆಗಳೊಟ್ಟಿಗೆ ಮಾತನಾಡಿದ ನಂತರ ಕೆಲವು ಷರತ್ತುಗಳನ್ನು ಮುಂದಿಟ್ಟು, ಈ ಸಂಸ್ಥೆಗಳು ನ್ಯಾಯಾಲಯದ ಮುಂದಿರುವ ಅರ್ಜಿಯನ್ನು ಹಿಂತೆಗೆದುಕೊಳ್ಳಲು ಸಮ್ಮತಿಸಿವೆ.

ನ್ಯಾಯಾಲಯದಲ್ಲಿರುವ ತಡೆಯಾಜ್ಞೆ ತೆರವುಗೊಂಡ ಕೂಡಲೇ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವ ಸಂಬಂಧ ಹೊಸತಾಗಿ ಅರ್ಜಿಗಳನ್ನು ಹಾಕಲು ಜನರಿಗೆ ಅವಕಾಶವಿದ್ದು, ನಿಗದಿತ ದಂಡ ಶುಲ್ಕದೊಂದಿಗೆ ಮನೆಗಳನ್ನು ಸಕ್ರಮಗೊಳಿಸಿಕೊಳ್ಳಬಹುದು ಎಂದರು.

ಮನೆಗಳನ್ನು ಸಕ್ರಮಗೊಳಿಸಿಕೊಳ್ಳಲು ದಂಡ ಶುಲ್ಕವನ್ನು ನಿಗದಿಗೊಳಿಸಲಾಗುವುದು ಎಂದ ಅವರು,ಎಷ್ಟು ಅಳತೆಯ ಜಾಗದಲ್ಲಿ ಮನೆ ನಿರ್ಮಿಸಲಾಗಿದೆ ಮತ್ತು ಯಾವ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ದಂಡ ಶುಲ್ಕವನ್ನು ನಿಗದಿಗೊಳಿಸಲಾಗುವುದು ಎಂದು ವಿವರಿಸಿದರು. ಈಗಾಗಲೇ ಸರ್ಕಾರ ಕಾನೂನು ಪ್ರಕ್ರಿಯೆ ಆರಂಭಿಸಿದ್ದು, ಒಂದೆರಡು ವಾರಗಳಲ್ಲಿ ಇದಕ್ಕೆ ಅಂತಿಮ ಸ್ವರೂಪ ದೊರೆಯಲಿದೆ. ಬೆಂಗಳೂರು ನಗರವೊಂದರಲ್ಲೇ ಆರು ಲಕ್ಷ ಮನೆಗಳಿದ್ದರೆ, ಉಳಿದಂತೆ ಮೈಸೂರು, ಮಂಗಳೂರು ಸೇರಿದಂತೆ ಹತ್ತು ನಗರ ಪಾಲಿಕೆಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಇದೇ ಪ್ರಮಾಣದ ಮನೆಗಳಿವೆ. ನಕ್ಷೆ ಉಲ್ಲಂಘನೆ ವಿಷಯದಲ್ಲಿ ಅದರ ಪ್ರಮಾಣವನ್ನು ಅಧಿಕಾರಿಗಳು ಗುರುತಿಸಿ, ದಂಡ ವಿಧಿಸಲಿದ್ದಾರೆ. ಉಲ್ಲಂಘನೆಯ ಪ್ರಮಾಣ ಶೇ. 40ಕ್ಕಿಂತ ಹೆಚ್ಚಿದ್ದರೆ, ಸಕ್ರಮ ಗೊಳಿಸುವುದು ಕ್ಲಿಷ್ಟಕರವಾಗಬಹುದೆಂದರು.