ತಿಮ್ಮಪ್ಪನ ಸನ್ನಿಧಿಯಲ್ಲಿ ಬಿಜೆಪಿ ಚುನಾವಣಾ ತಯಾರಿ ಸೆಪ್ಟೆಂಬರ್‍ನಲ್ಲಿರಾಜ್ಯದಲ್ಲಿ ಮೂರು ರಥಯಾತ್ರೆ

ಬೆಂಗಳೂರು, ಆ.20(ಕೆಎಂಶಿ)- ಮುಂಬರುವ ವಿಧಾನಸಭೆ ಚುನಾವಣೆ ಎದುರಿಸುವ ನೀಲಿನಕ್ಷೆ ಯನ್ನು ರಾಜ್ಯ ಬಿಜೆಪಿ ಮುಖಂಡರು ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ರೂಪಿಸಿದ್ದಾರೆ. ಈ ತೀರ್ಮಾ ನದಂತೆ ಸೆಪ್ಟೆಂಬರ್ ತಿಂಗಳಲ್ಲಿ ಕಮಲದ ಮೂರು ರಥಗಳು ಪ್ರತ್ಯೇಕವಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿವೆ.
ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ಆಯ್ಕೆಗೊಂಡಿರುವ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಎರಡು ದಿನಗಳ ತಿರುಪತಿ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಸ್ಥಿತಿಗತಿ ಬಗ್ಗೆ ಸಮಾಲೋಚಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿಗೆ ಕೆಲವು ಸಲಹೆಗಳನ್ನು ನೀಡಿ ದ್ದಾರೆ. ಪ್ರಚೋದಿತ ರಾಜಕೀಯದಿಂದ ಮತ ರಾಜಕಾರಣ ಮಾಡುವುದು ಬೇಡ. ಪ್ರತಿಪಕ್ಷದ ನಾಯಕರ ಮೇಲೆ ಮೊಟ್ಟೆ ಎಸೆಯುವುದು, ಕಪ್ಪು ಬಾವುಟ ಪ್ರದರ್ಶನ, ಘೇರಾವ್ ಮಾಡುವುದನ್ನು ತಕ್ಷಣವೇ ನಿಲ್ಲಿ ಸಲು ಕ್ರಮ ಕೈಗೊಳ್ಳಬೇಕು ಎಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಬೊಮ್ಮಾಯಿಗೆ ಖಡಕ್ ಸಲಹೆ ನೀಡಿದ್ಧಾರೆ. ಗಣೇಶೋತ್ಸವ, ಶ್ರೀರಾಮನವಮಿ, ಹನುಮ ಜಯಂತಿ ಸೇರಿದಂತೆ ಧಾರ್ಮಿಕ ಆಚರಣೆಗಳು ಮಾಮೂಲಿಯಂತೆ ನಡೆಯುತ್ತವೆ. ಅದಕ್ಕೆ ಪ್ರಚೋ ದನೆ ಅಗತ್ಯವಿಲ್ಲ. ಆ ಶಿಕ್ಷಣ ಮಂತ್ರಿ ಯನ್ನು ಕರೆದು ಬುದ್ಧಿ ಹೇಳಿ. ಸಮಸ್ಯೆ ಸೃಷ್ಟಿಸುವ ಹೇಳಿಕೆ ಬೇಡ ಎಂದು ಹಿತೋಪದೇಶ ಮಾಡಿದ್ದಾರೆ.

ಇಂಥಹ ರಾಜಕೀಯದಿಂದ ನಮಗೆ ಮತ ಬರುವುದಿಲ್ಲ. ಕಾರ್ಯಕರ್ತ ರನ್ನು ಒಗ್ಗೂಡಿಸಬೇಕು. ಜನರ ಮನ ವೊಲಿಸಬೇಕು. ನಮ್ಮ ಕಾರ್ಯಕ್ರಮಗಳನ್ನು ಅವರಿಗೆ ತಲುಪಿಸಬೇಕು. ಇನ್ನು ಮುಂದೆ ವಿಶ್ರಮಿ ಸುವುದು ಬೇಡ. ನಾನು ಧೂಳೆಬ್ಬಿಸುತ್ತೇನೆ. ನಡೆ ಯಿರಿ ಪ್ರವಾಸ ಕೈಗೊಳ್ಳೋಣ ಎಂದು ತಿಳಿಸಿದ್ದಾರೆ. ಸಂಘರ್ಷ ಮಾಡುತ್ತಿರುವ ಯುವ ಸಮುದಾಯಕ್ಕೆ ಕಿವಿಮಾತು ಹೇಳಿ ವಿನಾಕಾರಣ ವಿವಾದ ಸೃಷ್ಟಿಸ ದಂತೆ ಮನವರಿಕೆ ಮಾಡಿಕೊಡಿ ಎಂದು ಹೇಳಿ ದ್ದಾರೆ. ಅಲ್ಲದೆ, ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಚುನಾವಣಾ ತಯಾರಿ ಮತ್ತು ಪ್ರತಿಪಕ್ಷಗಳನ್ನು ಎದುರಿಸುವುದು ಹೇಗೆ ಎಂಬು ದರ ಬಗ್ಗೆ ರೂಪುರೇಷೆ ಸಿದ್ಧಪಡಿಸಿದರು.

ಅಂದು ತಿರುಪತಿಯಲ್ಲಿ ತೆಗೆದುಕೊಂಡ ತೀರ್ಮಾನದಂತೆ ಇಂದು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮುಖಂಡರು ಸಭೆ ಸೇರಿ ಪ್ರವಾಸದ ರೂಪುರೇಷೆ ಅಂತಿಮಗೊಳಿಸಿದ್ದಾರೆ.

ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರ ಪ್ರತ್ಯೇಕ ಸಾರಥ್ಯದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಈ ಮೊದಲು ಕಟೀಲ್ ಮತ್ತು ಬೊಮ್ಮಾಯಿ ಅವರ ಸಾರಥ್ಯದಲ್ಲಿ ಪ್ರವಾಸ ಕೈಗೊಳ್ಳುವ ತೀರ್ಮಾನಕ್ಕೆ ಬರಲಾಗಿತ್ತು. ಅದನ್ನು ಇದೀಗ ಬದಲಾವಣೆ ಮಾಡಿ ಯಡಿಯೂರಪ್ಪ ಮಾರ್ಗದರ್ಶನದಂತೆ ರಥಯಾತ್ರೆ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯದ 7 ಕೇಂದ್ರಗಳಲ್ಲಿ ಬಿಜೆಪಿ ಆಡಳಿತಕ್ಕೆ 3 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಜನೋತ್ಸವದ ಬೃಹತ್ ಸಮಾವೇಶಗಳು ನಡೆಯಲಿವೆ.