ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಒಂದು ವರ್ಷ

ನವದೆಹಲಿ, ಜ.16- ಭಾರತದಲ್ಲಿ ಲಸಿಕೆ ಅಭಿ ಯಾನ ಪ್ರಾರಂಭವಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಲಸಿಕಾ ಅಭಿಯಾನ ಒಂದು ವರ್ಷ ಪೂರೈಸಿರುವ ಕುರಿತು ಟ್ವೀಟ್ ಮಾಡಿರುವ ಅವರು, ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕಾ ಅಭಿಯಾನವು ಕೊರೊನಾ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿಯನ್ನು ನೀಡಿದೆ. ಕೊರೊನಾ ಸಾಂಕ್ರಾಮಿಕ ಮೊದಲ ಬಾರಿಗೆ ಅಪ್ಪಳಿಸಿದಾಗ ಈ ಬಗ್ಗೆ ನಮಗೂ ಹೆಚ್ಚೆನೂ ಮಾಹಿತಿ ಇರಲಿಲ್ಲ. ಆದರೂ ವಿಜ್ಞಾನಿಗಳು ಲಸಿಕೆಯನ್ನು ಅಭಿವೃದ್ಧಿ ಪಡಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಲಸಿಕೆ ಮೂಲಕ ಕೊರೊನಾ ವಿರುದ್ಧ ಹೋರಾಡಲು ನಮಗೆ ಸಹಾಯವಾಗಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಸಹಾಯ ಮಾಡಿದ ಎಲ್ಲಾ ಕಾರ್ಯಕರ್ತರಿಗೂ ಧನ್ಯವಾದವನ್ನು ತಿಳಿಸುತ್ತೇನೆ. ಇವರ ಸೇವಾ ಕಾರ್ಯಕ್ಕೆ ಹೆಮ್ಮೆಯೆನಿಸುತ್ತದೆ. ನಾವು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡೋಣ ಎಂದು ಟ್ವಿಟ್ಟರ್ ನಲ್ಲಿ ಕರೆ ನೀಡಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಕೂಡ ಈ ಬಗ್ಗೆ ಟ್ವೀಟ್ ಮಾಡಿ ವಿಶ್ವದಲ್ಲೇ ಇದು ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಂಡವಿಯಾ ಪ್ರಶಂಸಿಸಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೆÇೀಸ್ಟ್ ಮಾಡಿದ್ದಾರೆ. ವಿಶ್ವದ ಅತಿದೊಡ್ಡ ಅಭಿಯಾನ ಇಂದು ಒಂದು ವರ್ಷವನ್ನು ಪೂರೈಸಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಅಭಿಯಾನವು ಇಂದು ವಿಶ್ವದಲ್ಲೇ ಅತ್ಯಂತ ಯಶಸ್ವಿ ಅಭಿಯಾನವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೂ, ವಿಜ್ಞಾನಿಗಳಿಗೂ ಧನ್ಯವಾದ ತಿಳಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಈವರೆಗೆ ಕೋವಿಡ್ ಲಸಿಕೆ, 156.76 ಡೋಸ್ ವಿತರಣೆಯಾಗಿದೆ. ಕಳೆದ 24 ಗಂಟೆಗಳಲ್ಲಿ 66 ಲಕ್ಷಕ್ಕೂ ಹೆಚ್ಚು ಡೋಸ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಮತ್ತು ಸ್ಫೂರ್ತಿದಾಯಕ ನಾಯಕತ್ವದಿಂದಾಗಿ ಕೊರೊನಾ ವಿರುದ್ಧ ಸಾಮೂಹಿಕವಾಗಿ ಹೋರಾಡಲು ಸಹಾಯಕವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಲಸಿಕಾ ಅಭಿಯಾನ ಹೇಗೆ ಪ್ರಾರಂಭವಾಯಿತು ಮತ್ತು ಒಂದು ವರ್ಷದ ಅವಧಿಯಲ್ಲಿ 150 ಕೋಟಿಗೂ ಹೆಚ್ಚು ಡೋಸ್‍ಗಳನ್ನು ನೀಡುವಲ್ಲಿ ಹೇಗೆ ಯಶಸ್ವಿಯಾದೆವು ಎನ್ನುವುದರ ಬಗ್ಗೆ ಚಾರ್ಟ್‍ನ್ನು ಅವರು ಹಂಚಿಕೊಂಡಿದ್ದಾರೆ. ಕೊರೊನಾ ಲಸಿಕೆ ಅಭಿಯಾನವನ್ನು 2021ರ ಜನವರಿ 16ರಲ್ಲಿ ಪ್ರಾರಂಭಿಸಲಾಯಿತು. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,71,202 ಹೊಸ ಕೋವಿಡ್ ಪ್ರಕರಣಗಳು, 314 ಸೋಂಕಿತರು ಸಾವನ್ನಪ್ಪಿದ್ದು, 1,38,331 ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.