ಬಳ್ಳಾರಿಯಲ್ಲಿ ಮತ್ತೆ ‘ಕೈ’ ಬಲ ಪ್ರದರ್ಶನಕ್ಕೆ ನಿರ್ಧಾರ

ಬೆಂಗಳೂರು, ಅ.14 (ಕೆಎಂಶಿ)-ಗಣಿನಾಡಿನಲ್ಲಿ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಕಾಂಗ್ರೆಸ್ ಇದರ ಮೂಲಕ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಂಗ ಪ್ರವೇಶ ಮಾಡುತ್ತಿದೆ.

ಪಕ್ಷದ ಅಧಿನಾಯಕ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳ್ಳಾರಿ ಪ್ರವೇಶ ಮಾಡಿದ್ದು, ಇದರ ರಾಜಕೀಯ ಲಾಭ ಪಡೆಯಲು ಪ್ರದೇಶ ಕಾಂಗ್ರೆಸ್ ಅಲ್ಲಿನ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದೆ.

ಸಮಾವೇಶದಲ್ಲಿ ರಾಹುಲ್‍ಗಾಂಧಿ ರಾಜ್ಯ ಬಿಜೆಪಿ ಸರ್ಕಾರದ ಹಗರಣಗಳ ಬಿಚ್ಚಿಡುವ ಮೂಲಕ ಮತದಾರರಿಗೆ ಸಂದೇಶ ನೀಡಿ, ವಿಧಾನಸಭಾ ಚುನಾ ವಣೆಗೆ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ರಾಹುಲ್‍ಗಾಂಧಿ ಅಲ್ಲದೆ, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಹಾಗೂ ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಸ್ ಭಗೇಲ್ ಅಲ್ಲದೆ 18 ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು, ರಾಷ್ಟ್ರೀಯ ಕಾಂಗ್ರೆಸ್‍ನ ಪದಾಧಿ ಕಾರಿಗಳು ಪಾಲ್ಗೊಳ್ಳಲಿದ್ದಾರೆ. ಬಳ್ಳಾರಿ ಸಾರ್ವಜನಿಕ ಸಭೆಯನ್ನು ಯಶಸ್ವಿಗೊಳಿಸಲು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ಒಂದು ವಾರ ದಿಂದ ಪೂರ್ವ ಸಿದ್ಧತೆ ನಡೆಸಿದ್ದಾರೆ. ಸಿದ್ದರಾಮಯ್ಯ ಯಾತ್ರೆ ಬಿಟ್ಟು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಚರಿಸಿ, ಕಾರ್ಯಕರ್ತರನ್ನು ಮತ್ತು ಮುಖಂಡ ರನ್ನು ಸಮಾವೇಶಕ್ಕೆ ಕರೆತರಲು ನಾಲ್ಕು ದಿನ ಪ್ರವಾಸ ಮಾಡಿದ್ದರು. ಜುಲೈ 2010ರಲ್ಲಿ ಅಂದು ಗಣಿಧಣಿ ಗಳ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ, ಇದೇ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ವೇದಿಕೆ ಸಿದ್ಧ ಮಾಡಿದ್ದರು. ಇದೀಗ ಮತ್ತೆ ಕಳೆದುಕೊಂಡಿರುವ ಅಧಿಕಾರ ಗಳಿಸಲು ಬಳ್ಳಾರಿಯನ್ನೇ ಪ್ರದೇಶ ಕಾಂಗ್ರೆಸ್ ಪ್ರಯೋಗ ಮಾಡುತ್ತಿದೆ. ಸಮಾವೇಶವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಂಬಿಸಬೇಕೆಂಬ ಉದ್ದೇಶದಿಂದ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಒಂದೇ ವೇದಿಕೆಗೆ ಕರೆತರಲಾಗುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಳ್ಳಾರಿಯನ್ನೇ ಕಾಂಗ್ರೆಸ್ ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೂ ಬಳಸಿಕೊಳ್ಳಲು ಹೊರಟಿದೆ.

ಸಮಾವೇಶದ ಬಳಿಕ ಯಾತ್ರೆ ತೆಲಂಗಾಣ ರಾಜ್ಯ ಪ್ರವೇಶ ಮಾಡಲಿದೆ. ಮತ್ತೆ ಅಕ್ಟೋಬರ್ 22 ರಂದು ತೆಲಂಗಾಣದಿಂದ ರಾಯಚೂರು ಪ್ರವೇಶ ಮಾಡಲಿದೆ. ಅಂದು ಪ್ರಿಯಾಂಕಾ ಗಾಂಧಿ, ರಾಹುಲ್ ಮತ್ತು ರಾಜ್ಯ ನಾಯಕರ ಜೊತೆ ಒಂದಷ್ಟು ಹೆಜ್ಜೆ ಹಾಕಿ ಪಕ್ಷಕ್ಕೆ ಜನರ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆ ಮುಕ್ತಾಯವಾಗುತ್ತಿದ್ದಂತೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರತ್ಯೇಕವಾಗಿ ರಾಜ್ಯದಲ್ಲಿ ಚುನಾವಣಾ ಯಾತ್ರೆ ಆರಂಭಿಸಲಿದ್ದಾರೆ. ಉಭಯ ನಾಯಕರು ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಚುನಾವಣೆಗೂ ಮುನ್ನವೇ ಪಕ್ಷವನ್ನು ಗಟ್ಟಿ ಮಾಡಿ, ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ.