ಡೆಲ್ಟಾ ಪ್ಲಸ್ ವೇಗ, ತೀವ್ರತೆ ಅಧಿಕ

ಬೆಂಗಳೂರು, ಜೂ.24- ಡೆಲ್ಟಾ ಪ್ಲಸ್ ರೂಪಾಂತರ ತಳಿ ಯಾಗಿದ್ದು, ವೇಗವಾಗಿ ಹರಡಲಿದೆ. ಹೀಗಾಗಿ, ಅದರ ತೀವ್ರತೆ ಜಾಸ್ತಿ ಇರುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಹಾಗಾಗಿ, ಈ ವರ್ಷದ ಅಂತ್ಯದವರೆಗೂ ಸಭೆ-ಸಮಾರಂಭ ನಡೆಸಬಾರದು ಎಂದು ಸಲಹೆ ನೀಡಿದರು.

ಡೆಲ್ಟಾ ಪ್ಲಸ್ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯ ಬೇಕಿದೆ. 2ನೇ ಅಲೆಯಲ್ಲಿ ಡೆಲ್ಟಾ ತಳಿಯ ವೈರಾಣುವಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗಿವೆ. 4ರಿಂದ 5 ತಿಂಗಳ ಅವಧಿಯಲ್ಲಿ ವೈರಾಣು ರೂಪಾಂತರ ಗೊಳ್ಳುವುದು ಸಾಮಾನ್ಯವಾಗಿದ್ದು, ಅನಗತ್ಯವಾಗಿ ಆತಂಕಪಡ ಬೇಕಾಗಿಲ್ಲ. ಆದರೆ, ಈ ವರ್ಷ ಪೂರ್ತಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದರು. ಕರ್ನಾಟಕದಲ್ಲಿ 2ನೇ ಅಲೆಯೇ ಇನ್ನೂ ಪೂರ್ಣಗೊಂಡಿಲ್ಲ. ವಿದೇಶ ಗಳಲ್ಲಿ ಅದಾಗಲೇ 3ನೇ ಅಲೆ ಕಾಣಿಸಿಕೊಂಡಿದೆ. ದೇಶ ದಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ 2ನೇ ಅಲೆ ಮೊದಲು ಕಾಣಿಸಿಕೊಂಡಿತ್ತು. 3ನೇ ಅಲೆ ಕೂಡ ಅಲ್ಲಿಯೇ ಮೊದಲು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಆ ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಗತಿ ಮುನ್ಸೂಚನೆ ದೊರೆಯುತ್ತಿದ್ದಂತೆ ಪರಿಸ್ಥಿತಿಯನ್ನು ಎದುರಿಸಲು ಸಕಲ ರೀತಿಯಲ್ಲಿಯೂ ಸನ್ನದ್ಧರಾಗ ಬೇಕು. ದೇಶದಲ್ಲಿ ಲಭ್ಯವಿರುವ ಲಸಿಕೆಗಳು ರೂಪಾಂತರ ವೈರಸ್ ಗಳ ವಿರುದ್ಧವೂ ಕಾರ್ಯನಿರ್ವಹಿಸಲು ಸಮರ್ಥವಾಗಿವೆ. ಆದಷ್ಟೂ ಬೇಗ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದರು.