ಫ್ಲೆಕ್ಸ್ ವಿವಾದ: ಶಿವಮೊಗ್ಗ ಉದ್ವಿಗ್ನ

ಶಿವಮೊಗ್ಗ,ಆ.16-ಸ್ವಾತಂತ್ರ್ಯ ಅಮೃತ ಮಹೋತ್ಸವದ ವೇಳೆ ಶಿವಮೊಗ್ಗದ ವೃತ್ತವೊಂದರಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸೋಮವಾರ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದರ ನಡುವೆ ಪ್ರತ್ಯೇಕ ಸ್ಥಳದಲ್ಲಿ ಇಬ್ಬರಿಗೆ ಚಾಕುವಿ ನಿಂದ ಇರಿದಿದ್ದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತ್ತಾದರೂ ಪೊಲೀಸರ ಕಟ್ಟುನಿಟ್ಟಿನ ಕ್ರಮದಿಂದ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ.

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಬಳಿ ಸೋಮವಾರ ಸಂಘ ಟನೆಯೊಂದು ಟಿಪ್ಪುವಿನ ಫೋಟೋ ಇಟ್ಟು ಸ್ವಾತಂತ್ರ್ಯ ದಿನ ಆಚರಿಸು ತ್ತಿತ್ತು. ಅದೇ ವೇಳೆ ಮತ್ತೊಂದು ಗುಂಪು ವೃತ್ತದ ಹೈಮಾಸ್ಟ್ ದೀಪದ ಕಂಬಕ್ಕೆ ವೀರ ಸಾವರ್ಕರ್ ಫ್ಲೆಕ್ಸ್ ಅಳವಡಿಸಲು ಮುಂದಾಯಿತು. ಪಕ್ಕದಲ್ಲಿ ಸ್ವಾತಂತ್ರ್ಯ ದಿನ ಆಚರಿಸುತ್ತಿದ್ದ ಸಂಘಟನೆಯವರು ಇದನ್ನು ಗಮನಿಸಿ ಸಿಟ್ಟಿಗೆದ್ದು, ವೃತ್ತದಲ್ಲಿದ್ದ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಮುಂದಾದರು. ಈ ವೇಳೆ ಫ್ಲೆಕ್ಸ್ ಜೊತೆಯಿದ್ದ ರಾಷ್ಟ್ರಧ್ವಜವೂ ನೆಲಕ್ಕುರುಳಿತು. ಎರಡು ಗುಂಪು ಗಳು ಎದುರಾಗಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಗುಂಪು ಚದುರಿಸಿದ ಬಳಿಕ ಫ್ಲೆಕ್ಸ್ ತೆಗೆಸಿ, ಅಲ್ಲಿ ರಾಷ್ಟ್ರ ಧ್ವಜ ಹಾರಿಸಿದರು. ಬಳಿಕ ವೃತ್ತದಲ್ಲಿ ಸಾವರ್ಕರ್ ಕಟೌಟ್ ಅಳವಡಿಸಲು ಅವಕಾಶ ನೀಡುವಂತೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದೇ ವೇಳೆ ತರಕಾರಿ ಮಾರುಕಟ್ಟೆ ಬಳಿಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಪ್ರೇಮ್‍ಸಿಂಗ್ ಎಂಬ ಯುವಕನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ನಡೆಯಿತು. ತಕ್ಷಣವೇ ಆತನನ್ನು ಸಮೀಪದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿ ದ್ದಾರೆ. ಅಲ್ಲದೆ ಭದ್ರಾವತಿಯಲ್ಲಿ ಅಂಗಡಿ ಮುಚ್ಚಿ ಮನೆಗೆ ತೆರಳುವಾಗ ಪ್ರವೀಣ್‍ಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ವಿಷಯ ಹರಡುತ್ತಿದ್ದಂತೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಪೊಲೀಸರು ಹಾಗೂ ಪ್ರತಿ ಭಟನಾಕಾರರ ನಡುವೆ ವಾಕ್ಸಮರ ನಡೆಯಿತು. ಪರಿಸ್ಥಿತಿ ಕೈಮೀರುವುದನ್ನು ಮನಗಂಡ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾ ದರು. ಪರಿಸ್ಥಿತಿ ನಿಯಂತ್ರಣಕ್ಕೆ ಅಶ್ರುವಾಯು ಸಿಡಿಸಲು ಮುಂದಾದರು. ಆದರೆ ಆ ಕ್ರಮವನ್ನು ಕೈಬಿಟ್ಟು ಸಮಾಧಾನದಿಂದಲೇ ಗುಂಪು ಚದುರಿಸಿದರು. ಆದರೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಆ ಕ್ಷಣದಿಂದಲೇ 144 ಸೆಕ್ಷನ್‍ನಡಿ ನಿಷೇಧಾಜ್ಞೆ ವಿಧಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ನಗರಾಧ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಎಡಿಜಿಪಿ(ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ದೌಡಾಯಿಸಿ, ಘಟನೆಯ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಅಲ್ಲಿಯೇ ಮೊಕ್ಕಾಂ ಹೂಡಿ ಬೂದಿಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಘಟನೆಯ ಬೆನ್ನಲ್ಲೇ ಶಿವಮೊಗ್ಗ ನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ನೇತೃತ್ವದಲ್ಲಿ ಅನಧಿಕೃತ ಫ್ಲೆಕ್ಸ್‍ಗಳನ್ನು ತೆರವುಗೊಳಿಸಲಾಗಿದೆ.

ಇರಿದವರು ಬಂಧನ: ತರಕಾರಿ ಮಾರುಕಟ್ಟೆ ಬಳಿಯ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ರಾಜಾಸ್ತಾನ ಮೂಲದ ಪ್ರೇಮ್‍ಸಿಂಗ್‍ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಆರೋಪಿಗಳನ್ನು ಘಟನೆ ನಡೆದ ಕೆಲ ಗಂಟೆಗಳಲ್ಲೇ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದ ಪ್ರಮುಖ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರತಿ ಕ್ರಿಯಿಸಿರುವ ಎಡಿಜಿಪಿ ಅಲೋಕ್‍ಕುಮಾರ್, ಪ್ರಕರಣ ಸಂಬಂಧ ನಾಲ್ವ ರನ್ನು ಬಂಧಿಸಲಾಗಿದ್ದು, ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಗೃಹ ಸಚಿವರ ಭೇಟಿ: ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಬೆಳಗ್ಗೆ ಶಿವಮೊಗ್ಗಕ್ಕೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪರಿಸ್ಥಿತಿ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ವಹಿಸು ವಂತೆ ಸೂಚಿಸಿದ್ದಲ್ಲದೆ ಆಸ್ಪತ್ರೆಯಲ್ಲಿರುವ ಗಾಯಾಳು ಪ್ರೇಮ್‍ಸಿಂಗ್ ಆರೋಗ್ಯ ವಿಚಾರಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಸಂತೋಷ್‍ಜಿ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೆಲವು ಸಂಘ ಟನೆಯವರನ್ನು ಪ್ರೋತ್ಸಾಹಿಸಿದ್ದರ ಪರಿಣಾಮವಾಗಿ ರಾಜ್ಯದಲ್ಲಿ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹರಿಹಾಯ್ದರು.ಹಿಂದೂಗಳು ಒಗ್ಗಟ್ಟಾದರೆ!: ಅತ್ತ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಹಿಂದೂಗಳ ಮೇಲೆ ದಾಳಿ ನಡೆಸು ವುದನ್ನು ನಿಲ್ಲಿಸಬೇಕು. ಹಿಂದುಗಳೇನಾದರೂ ಒಗ್ಗಟ್ಟಿನಿಂದ ಎದ್ದು ನಿಂತರೆ ಯಾರೂ ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಶಿವಮೊಗ್ಗದಲ್ಲಿ ನಡೆದ ಘಟನೆ ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ವಾಕ್ಸಮರ ಮುಂದುವರೆಸಿದ್ದಾರೆ. ಸದ್ಯ ಶಿವ ಮೊಗ್ಗದ ಪರಿಸ್ಥಿತಿ ನಿಯಂ ತ್ರಣದಲ್ಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿವರೆಗೆ ಮಾತ್ರ ನಿಷೇಧಾಜ್ಞೆ ಇರಲಿದೆ. ಆದರೂ ಮುಂಜಾಗ್ರತೆ ಯಿಂದ ಶಿವಮೊಗ್ಗದ ಜೊತೆಗೆ ಭದ್ರಾವತಿ ನಗರದಲ್ಲೂ ಪೊಲೀಸರು ಭಾರೀ ಬಂದೋಬಸ್ತ್ ಮಾಡಿದ್ದಾರೆ. ಪೂರ್ವವಲಯದ ಜಿಲ್ಲೆಗಳಿಂದ ಹೆಚ್ಚಿನ ಪೊಲೀಸ್ ಪಡೆಯನ್ನು ನಿಯೋ ಜಿಸಿ ಕಟ್ಟೆಚ್ಚರ ವಹಿಸಲಾಗಿದೆ.