ಸಕ್ರಮ ಗಣಿಗಾರಿಕೆಗೆ ಮುಂದೆ ಬರುತ್ತಿಲ್ಲ!

ಬೆಂಗಳೂರು, ಆ.16(ಕೆಎಂಶಿ)- ಅದಿರು ಗಣಿಕಾರಿಕೆ ಗುತ್ತಿಗೆ ಪಡೆಯಲು ಉದ್ದಿಮೆದಾರರು ಮುಂದೆ ಬರುತ್ತಿಲ್ಲ. ದಶಕದ ಹಿಂದೆ ರಾಜ್ಯ ಸರ್ಕಾ ರವನ್ನೇ ತಮ್ಮ ದಾಳವಾಗಿ ಮಾಡಿಕೊಂಡಿದ್ದ ಧಣಿಗಳಿಗೆ ಈಗ ಅದಿರು ಬೇಡವಂತೆ.

ಅಕ್ರಮ ಗಣಿಗಾರಿಕೆ ಮಾಡಿ ವಿದೇಶಗಳಿಗೆ ಕಳ್ಳದಾರಿಯಲ್ಲಿ ಅದಿರು ರವಾನೆ ಮಾಡಿ ಸಾವಿ ರಾರು ಕೋಟಿ ರೂ. ಲೂಟಿ ಮಾಡಿದವರು ಈಗ ಸಕ್ರಮವಾಗಿ ಗಣಿಗಾರಿಕೆ ನಡೆಸಲು ಮುಂದೆ ಬರುತ್ತಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯದಲ್ಲಿ ಸಿ ದರ್ಜೆಯ ಅದಿರು ಗಣಿಗಾರಿಕೆ ಮಾಡಿ ರಫ್ತಿಗೆ ಅವಕಾಶ ಮಾಡಿಕೊಟ್ಟಿದೆ. ನ್ಯಾಯಾ ಲಯದ ಆದೇಶದಂತೆ ಕೇಂದ್ರ ಸರ್ಕಾರ ಗಣಿ ಗುತ್ತಿಗೆಗೆ ಜಾಗ ನಿಗದಿಪಡಿಸಿ ಪ್ರತಿ ಟನ್‍ಗೆ ಇಷ್ಟೆಂದು ದರ ನಿಗದಿಪಡಿಸಿದೆ. ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ 28 ಗಣಿಗಳನ್ನು ಗುರುತಿಸಿ ಹರಾಜು ಮಾಡಿತ್ತು. ಹರಾಜಿನಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪಾಲ್ಗೊಂಡು ಕೇವಲ 12 ಗಣಿಗಳನ್ನು ಮಾತ್ರ ಗುತ್ತಿಗೆಗೆ ಪಡೆದಿದ್ದಾರೆ. ಇನ್ನೂ 16 ಗಣಿ ಗಳನ್ನು ಕೇಳುವವರೇ ಇಲ್ಲ. ಸರ್ಕಾರ ತನ್ನ ಸಂಪ ನ್ಮೂಲ ಕ್ರೂಢಿಸಿಕೊಳ್ಳಲು ಮತ್ತೆ 16 ಗಣಿಗಳನ್ನು ಗುತ್ತಿಗೆ ನೀಡಲು ಟೆಂಡರ್ ಕರೆಯಲು ಮುಂದಾ ಗಿದೆ. ಗಣಿಗಳ ಸ್ಥಿತಿಗತಿಯ ಬಗ್ಗೆ ಆ ಇಲಾಖೆಯ ಉಸ್ತುವಾರಿ ವಹಿಸಿಕೊಂಡಿರುವ ಹಾಲಪ್ಪ ಆಚಾರ್ ಅವರೇ ಇಂದಿಲ್ಲಿ ಸುದ್ದಿಗಾರರ ಮುಂದೆ ಈ ವಿಷಯ ಬಹಿರಂಗಪಡಿಸಿದರು.

ಇಲಾಖೆಯಲ್ಲಿ ಬಿಗಿ ಕ್ರಮ ಕೈಗೊಂಡಿದ್ದು, ಕೇಂದ್ರದ ಮಾರ್ಗಸೂಚಿಯಡಿಯಲ್ಲಿ ಗಣಿಗಾರಿಕೆಗೆ ಅವ ಕಾಶ ನೀಡುತ್ತಿದ್ದೇವೆ. ಕಳೆದೆರಡು ವರ್ಷಗಳಲ್ಲಿ ಇಲಾಖೆಗೆ ನಿಗದಿಪಡಿಸಿದ ಆದಾಯಕ್ಕಿಂತ 145ರಷ್ಟು ಹೆಚ್ಚು ಸಂಗ್ರಹವಾಗಿದೆ ಎಂದರು.

ಹೆಚ್ಚಿನ ಎಂ ಸ್ಯಾಂಡ್ ಉತ್ಪಾದನೆ: ಮರಳಿನ ಕೊರತೆಯನ್ನು ನೀಗಿಸಲು ರಾಜ್ಯಾ ದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎಂ ಸ್ಯಾಂಡ್ ಉತ್ಪಾದಿಸಲು ಸರ್ಕಾರ ಬಯಸಿದೆ. ಇದಕ್ಕಾಗಿ ಮರಳು ನೀತಿಗೆ ತಿದ್ದುಪಡಿ ತಂದು ಹೆಚ್ಚು ಪ್ರಮಾಣದಲ್ಲಿ ಎಂ ಸ್ಯಾಂಡ್ ಉತ್ಪಾದಿ ಸಲು ಉತ್ತೇಜನ ನೀಡಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಪ್ರತಿ ವರ್ಷ ನಲವತ್ತೈದು ದಶಲಕ್ಷ ಟನ್ ಮರಳಿಗೆ ಬೇಡಿಕೆ ಇದ್ದು, ಇದರಲ್ಲಿ ಮೂವತ್ತೈದು ದಶಲಕ್ಷ ಟನ್‍ನಷ್ಟು ಬೇಡಿಕೆ ಎಂ ಸ್ಯಾಂಡ್‍ನಿಂದ ಪೂರೈಕೆಯಾಗುತ್ತಿದೆ. ಆದರೆ ಲಭ್ಯವಿರುವ ಮರಳಿನ ಪ್ರಮಾಣ ಐದು ದಶಲಕ್ಷ ಟನ್ ಗಳಷ್ಟಿದ್ದು, ಇನ್ನೂ ಐದು ದಶಲಕ್ಷ ಟನ್ ಗಳಷ್ಟು ಮರಳಿನ ಕೊರತೆ ಇದೆ. ಈಗ ಲಭ್ಯ ವಾಗುತ್ತಿರುವ ಐದು ದಶಲಕ್ಷ ಟನ್ ಮರಳನ್ನು ಹಂಚಿಕೆ ಮಾಡಲು ಹಟ್ಟಿ ಮೈನ್ಸ್ ಮತ್ತು ಕೆ.ಎಸ್.ಎಂ.ಐ.ಎಲ್‍ಗೆ ಅನುಮತಿ ನೀಡಲಾಗಿದೆ. ಈ ಪೈಕಿ ಹಟ್ಟಿ ಮೈನಿಂಗ್‍ಗೆ ಹದಿನೈದು ಜಿಲ್ಲೆಗಳಲ್ಲಿ ಮರಳು ಪೂರೈಕೆ ಮಾಡಲು ಅನುಮತಿ ನೀಡಿದ್ದು, ಉಳಿದಂತೆ ಹದಿನಾರು ಜಿಲ್ಲೆಗಳಲ್ಲಿ ಕೆ.ಎಸ್.ಎಂ.ಐ.ಎಲ್ ಮರಳು ಪೂರೈಸಲಿದೆ. ರಾಜ್ಯದ ಕೆರೆ, ಹಳ್ಳ, ತೊರೆಗಳಲ್ಲಿ ಸಿಗುವ ಮರಳನ್ನು ಹಂಚಿಕೆ ಮಾಡಲು ಗ್ರಾಮ ಪಂಚಾಯಿತಿಗಳಿಗೆ ಅನುಮತಿ ನೀಡಲಾಗಿದ್ದು,ಇದನ್ನು ಮೀರಿ ರಾಜ್ಯದ ಯಾವುದೇ ಭಾಗದಲ್ಲಿ ಮರಳು ಮಾಫಿಯಾ ತಲೆ ಎತ್ತಿದ್ದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.