ಚಿಲುಮೆ ವಹಿವಾಟಿನ ನಿಗೂಢತೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆ

ಬೆಂಗಳೂರು, ನ.24 (ಕೆಎಂಶಿ)- ಚಿಲುಮೆ ಸಂಸ್ಥೆಯ ಅಕ್ರಮಗಳ ಹಿಂದಿನ ರೂವಾರಿಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ಇಷ್ಟು ದಿನವಾದರೂ ಈ ಅಕ್ರಮ ಸಂಸ್ಥೆಯ ಹಣಕಾಸಿನ ವಹಿವಾಟಿನ ಮೇಲೆ ಈ ಸಂಸ್ಥೆಗೆ ಹಣ ನೀಡಿದವರ ಮೇಲೆ ಯಾಕೆ ಸಿಬಿಐ, ಐಟಿ, ಇಡಿ ದಾಳಿ ನಡೆಸಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಖಾಸಗಿ ಸಂಸ್ಥೆ ಚಿಲುಮೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೆ ವಹಿಸಿದ್ದರ ಹಿಂದೆ ಬಿಬಿಎಂಪಿ ಮತ್ತು ಚುನಾವಣಾ ಆಯೋಗದ ಅಧಿಕಾರಿಗಳೂ ಇದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ. ಹೊಂಗಸಂದ್ರದ ಬಿಜೆಪಿಯ ಕಚೇರಿಯಲ್ಲಿ ಹಾಲಿ ಶಾಸಕರು ಹಾಗೂ ವಿಧಾನಸಭೆಯ ಮುಖ್ಯ ಸಚೇತಕರಾದ ಸತೀಶ್‍ರೆಡ್ಡಿಯವರ ನೇತೃತ್ವದಲ್ಲಿಯೇ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸುವ ಕುರಿತು ತರಬೇತಿ ನೀಡಲಾಗಿದೆ.

ಪರಿಷ್ಕರಣೆ ಕಾರ್ಯಕ್ಕಾಗಿಯೇ 25000 ದಿಂದ 30000 ರೂಪಾಯಿಗಳನ್ನು ನೀಡಿ ನೇಮಕಾತಿ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಹಣದ ಮೂಲದ ಬಗ್ಗೆ ತನಿಖೆ ನಡೆಯಬೇಕು. ನೂರಾರು ಸಂಖ್ಯೆಯ ನೌಕರರಿಗೆ ಸಂಬಳ ಕೊಡಲು ಖರ್ಚು ಮಾಡಿದ ಕೋಟ್ಯಾಂತರ ರೂಪಾಯಿಗಳನ್ನು ಈ ಸಂಸ್ಥೆಗೆ ನೀಡಿದವರು ಯಾರು, ಇಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿ ಸುತ್ತಿದ್ದವರ ಉದ್ದೇಶವಾದರೂ ಏನು, ಅಕ್ರಮವಾಗಿ ವಿನಿ ಯೋಗಿಸಿದ ಹಣದ ಕುರಿತು ಇನ್ನೂ ದಾಳಿಗಳನ್ನು ನಡೆಸದೆ ಐಟಿ, ಇಡಿಗಳು ಯಾಕೆ ಇನ್ನೂ ಕಣ್ಣು ಮುಚ್ಚಿಕೊಂಡಿವೆ. ಮತದಾರರ ಪಟ್ಟಿಯ ಅಕ್ರಮಕ್ಕೆ ಸರ್ಕಾರ, ಚುನಾವಣಾ ಆಯೋಗ ಮತ್ತು ಸಂಬಂಧ ಪಟ್ಟ ಜಿಲ್ಲಾ ಚುನಾವಣಾಧಿಕಾರಿ, ಮತದಾರರ ನೋಂದಣಾ ಧಿಕಾರಿ, ಸಹಾಯಕ ಮತದಾರರ ನೋಂದಣಾಧಿ ಕಾರಿಗಳು ಸಂಪೂರ್ಣ ಜವಾಬ್ಧಾರರಾಗಿರುತ್ತಾರೆ. ಇಷ್ಟು ಬೃಹತ್ ಮಟ್ಟದ ಹಗರಣ ನಡೆದಿದ್ದರೂ ಚುನಾವಣಾ ಆಯೋಗದ ಅಧಿಕಾರಿಗಳ ಮೇಲೆ ಯಾಕೆ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.