ಹೊರೆ ಇಲ್ಲದ; ಬರೆ ಹಾಕದ ಬೊಮ್ಮಾಯಿ ಬಜೆಟ್

ಒಂದು ದಶಕದ ನಂತರ ಮದ್ಯ ಸೇರಿದಂತೆ ಯಾವುದರ ಮೇಲೂ ತೆರಿಗೆ ಹೇರದೆ, ಎಲ್ಲಾ ವಲಯಗಳಿಗೂ ಯೋಜನೆ ಪ್ರಕಟಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಕೃಷಿ, ನೀರಾವರಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣಕ್ಕೆ ಒತ್ತು ನೀಡಿರುವ ಮುಖ್ಯಮಂತ್ರಿಗಳು ಇರುವ ಸಂಪನ್ಮೂಲಗಳ ಜೊತೆಗೆ 72,000 ಕೋಟಿ ರೂ. ಸಾಲ ತರುವುದಾಗಿ ತಿಳಿಸಿದ್ದಾರೆ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡಿಸಿ, ಯಾವ ಸಮುದಾಯದ ಮೇಲೂ ಭಾರ ಹೊರಿಸದೆ ಎಲ್ಲರಿಗೂ ಏನೋ ಲಭ್ಯವಾಗಿದೆ ಎಂಬ ಭಾವನೆ ಮೂಡಿಸಿದ್ದಾರೆ. ಸಾಲ ಎತ್ತುವ ಉದ್ದೇಶದಿಂದಲೇ ಯೋಜನಾ ಗಾತ್ರವನ್ನು 2.65 ಲಕ್ಷ ಕೋಟಿ ರೂ.ಗೆ ಹಿಗ್ಗಿಸಿದ್ದಾರೆ. ರೈತರು, ಮಹಿಳೆಯರು, ಮಕ್ಕಳು ಸೇರಿದಂತೆ ಸಮಾಜದ ಎಲ್ಲರಿಗೂ ಬಜೆಟ್ ಮೂಲಕ ಶಕ್ತಿ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಅವರು, ಬಜೆಟ್ ಗಾತ್ರವನ್ನು ಸರಿದೂಗಿ ಸಲು 2022-23ರಲ್ಲಿ ಒಟ್ಟು ಎಪ್ಪತ್ತೆರಡು ಸಾವಿರ ಕೋಟಿ ರೂಪಾಯಿ ಸಾಲ ಪಡೆಯ ಲಾಗುವುದು ಎಂದರು. ಇದರಿಂದ ರಾಜ್ಯದ ಒಟ್ಟು ಸಾಲದ ಪ್ರಮಾಣ ಐದು ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿ ಒಟ್ಟು 5,18,366 ಕೋಟಿ ರೂಪಾಯಿಗಳಷ್ಟಾಗಲಿದೆ. ಆಂತರಿಕ ಸಂಪನ್ಮೂಲ ಮತ್ತು ಸಾಲದ ಹಣದಲ್ಲಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಪ್ರಕಟಿಸಿದ್ದಲ್ಲದೆ, ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ನೀಡಲಾಗುವ ಮಾಸಾಶನವನ್ನು 600 ರೂ.ನಿಂದ 800 ರೂ.ಗಳಿಗೆ, ಹಾಗೂ ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರ ಮಾಸಾಶನ 10,000 ರೂ.ಗೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ.

50 ವರ್ಷ ಮೀರಿದ ಕುಸ್ತಿ ಪಟುಗಳಿಗೆ ಮಾಸಾಶನ ಮೊತ್ತ ಒಂದು ಸಾವಿರ ರೂ.ಗೆ ಹೆಚ್ಚಳ. ಆಶಾ ಕಾರ್ಯಕರ್ತರು, ಗ್ರಾಮ ಸಹಾಯಕರಿಗೆ, ಬಿಸಿ ಊಟ ತಯಾರಕರು ಮತ್ತು ಸಹಾಯಕರಿಗೆ ತಲಾ ಒಂದು ಸಾವಿರ ರೂ. ಗೌರವ ಧನ ಹೆಚ್ಚಳ.

ಅಂಗನವಾಡಿ ಕಾರ್ಯಕರ್ತರಿಗೆ ಸೇವಾನುಭವ ಆಧಾರದಲ್ಲಿ ಒಂದು ಸಾವಿರದಿಂದ 1,500 ರಷ್ಟು ಗೌರವ ಧನ ಹೆಚ್ಚಳ, ಪೌರ ಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ ಏರಿಕೆ, ಪ್ರವಾಸಿ ಗೈಡ್‍ಗಳಿಗೆ 2000 ರೂ. ಪ್ರೋತ್ಸಾಹ ಧನ ಪ್ರಸ್ತಾಪಿ ಸಲಾಗಿದೆ. ರಾಜ್ಯದ ಸ್ವಂತ ತೆರಿಗೆಗಳ ಮೂಲಕ 1,31,883 ಕೋಟಿ ರೂಪಾಯಿ, ಸಾಲಗಳ ಮೂಲಕ 72 ಸಾವಿರ ಕೋಟಿ ರೂಪಾಯಿ, ತೆರಿಗೆಯೇತರ ರಾಜಸ್ವದಿಂದ 10,941 ಕೋಟಿ ರೂ., ಕೇಂದ್ರ ತೆರಿಗೆಯ ಪಾಲಿನಿಂದ 29,783 ಕೋಟಿ ರೂ., ಕೇಂದ್ರದ ಸಹಾಯಾನುಧನದ ರೂಪದಲ್ಲಿ 17,281 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಬಜೆಟ್ ಗುರಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದ ತೆರಿಗೆಗಳ ಪೈಕಿ ವಾಣಿಜ್ಯ ತೆರಿಗೆಗಳಿಂದ 77,010 ಕೋಟಿ ರೂಪಾಯಿ, ಅಬಕಾರಿ ಬಾಬ್ತಿನಲ್ಲಿ 29 ಸಾವಿರ ಕೋಟಿ ರೂಪಾಯಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಮೂಲಕ 15 ಸಾವಿರ ಕೋಟಿ ರೂಪಾಯಿ, ಮೋಟಾರುವ ವಾಹನ ತೆರಿಗೆ ಬಾಬ್ತಿನಲ್ಲಿ 8007 ಕೋಟಿ ರೂಪಾಯಿ, ಇತರ ಬಾಬ್ತುಗಳಿಂದ 2,866 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗುವುದು ಎಂದು ಹೇಳಿದರು.

ಶಿಕ್ಷಣಕ್ಕೆ 31,980 ಕೋಟಿ ರೂಪಾಯಿ, ಜಲ ಸಂಪನ್ಮೂಲಕ್ಕೆ 20,601 ಕೋಟಿ ರೂಪಾಯಿ, ಗ್ರಾಮೀಣಾಭಿವೃದ್ಧಿಗೆ 17,325 ಕೋಟಿ ರೂಪಾಯಿ, ಕಂದಾಯಕ್ಕೆ 14,388 ಕೋಟಿ ರೂಪಾಯಿ, ಆರೋಗ್ಯಕ್ಕೆ 13,982 ಕೋಟಿ ರೂಪಾಯಿ, ಇಂಧನಕ್ಕೆ 12,655 ಕೋಟಿ ರೂಪಾಯಿ. ಒಳಾಡಳಿತ ಮತ್ತು ಸಾರಿಗೆಗೆ 11,272 ಕೋಟಿ, ಲೋಕೋಪಯೋಗಿಗೆ 10,447 ಕೋಟಿ, ಸಮಾಜ ಕಲ್ಯಾಣಕ್ಕೆ 9,380 ಕೋಟಿ, ಕೃಷಿ ಮತ್ತು ತೋಟಗಾರಿಕೆಗೆ 8,457 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 4,713 ಕೋಟಿ, ವಸತಿಗೆ 3,594 ಕೋಟಿ ಮತ್ತು ಆಹಾರ ನಾಗರಿಕ ಸರಬರಾಜು ಬಾಬ್ತಿಗೆ 2,988 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ಪ್ರಕಟಿಸಿದರು.