ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಿನ 50 ದಿನ ರಜೆ ಹಾಕದಂತೆ ಡಾ.ಸುಧಾಕರ್ ಮನವಿ

ಬೆಂಗಳೂರು,ಮಾ.18(ಕೆಎಂಶಿ)-ರಾಜ್ಯದಲ್ಲಿ 2ನೇ ಕೋವಿಡ್ ಅಲೆ ಎರಗುವ ಸಾಧ್ಯತೆ ಇರುವುದರಿಂದ 50 ದಿನಗಳ ಕಾಲ ಆರೋಗ್ಯ ಇಲಾಖೆಯ ಯಾವುದೇ ಸಿಬ್ಬಂದಿ ರಜೆ ಹಾಕದೆ ಕರ್ತವ್ಯ ನಿರ್ವಹಿಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೂ ಸಹ ಮುಂದಿನ 50 ದಿನಗಳ ಕಾಲ ರಜೆ ಹಾಕದೆ ಕೆಲಸ ಮಾಡುತ್ತೇನೆ. ಅದೇ ರೀತಿ ಸಿಬ್ಬಂದಿ ಕೂಡ ರಜೆ ಹಾಕದೆ ಕೆಲಸ ಮಾಡಬೇಕು. ಕೊರೊನಾ ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದೆ. 2ನೇ ಅಲೆ ಭೀತಿ ಹೆಚ್ಚಾಗಿದೆ. ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳ ಬೇಕು. ಮೊದಲ ಹಂತದಲ್ಲಿ ಕನಿಷ್ಠ 55 ಲಕ್ಷ ಮಂದಿ ಲಸಿಕೆ ಪಡೆದರೆ, ನಿಜವಾದ ಆಪತ್ತಿನಿಂದ ದೂರ ಇರಬಹುದು. ಕೆಲವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳದೆ ಉದಾಸೀನ ತೋರುತ್ತಿದ್ದಾರೆ. ಸರ್ಕಾರವೇ ಮುತುವರ್ಜಿ ವಹಿಸಿ, ಲಸಿಕೆ ಹಾಕಿಸಿಕೊಳ್ಳಿ ಎಂದು ಹೇಳಿದರೂ ಮುಂದೆ ಬಾರದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಸುಧಾಕರ್ ವಿಷಾದಿಸಿದರು.

ಕಳೆದ ವರ್ಷ ಕೋವಿಡ್ ಲಸಿಕೆ ಇರಲಿಲ್ಲ, ಈಗ ಲಸಿಕೆ ಲಭ್ಯ ವಿದೆ, ಜನರು ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯವನ್ನು ತಡೆಗಟ್ಟ ಬಹುದು. ಸೋಂಕಿನ ಪ್ರಮಾಣ ಕಡಿಮೆಯಾಗುವು ದರಿಂದ ಸಾವಿನ ಸಂಖ್ಯೆ ಇಳಿಮುಖವಾಗುತ್ತದೆ. ಇದನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡಪರಿ ಣಾಮಗಳು ಬೀರುವುದಿಲ್ಲ. ವದಂತಿಗಳಿಗೆ ಕಿವಿಗೊಡ ಬಾರದು ಎಂದು ಸುಧಾಕರ್ ಮನವಿ ಮಾಡಿದರು.

ಗುರುವಾರ ನಡೆದ ಸಭೆಯಲ್ಲಿ ತಾಂತ್ರಿಕರ ಸಲಹಾ ಸಮಿತಿ ಕೆಲವು ಮಹತ್ವದ ಸಲಹೆಗಳನ್ನು ನೀಡಿದೆ. ರಾಜ್ಯದ ಐದು ಜಿಲ್ಲೆಗಳ ಕಡೆ ಗಮನ ಇರಿಸಬೇಕೆಂದು ಸೂಚನೆ ನೀಡಿದ್ದಾರೆ. ಇಂತಹ ಕಡೆಗಳಲ್ಲಿ ಕೆಲವು ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಅನಿವಾರ್ಯ. ಬೆಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ಸಾವಿರ ಹಾಸಿಗೆಗಳನ್ನು ಮೀಸಲಿಡುವುದು, ಪರೀಕ್ಷೆ ಪ್ರಮಾಣ ಹೆಚ್ಚಳ, ಕಡ್ಡಾಯ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಹಲವು ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಸಚಿವ ಡಾ.ಸುಧಾಕರ್ ಹೇಳಿದರು.