ನಮಗೆ ಹೈಕಮಾಂಡ್ ಅಭಯ

ಬೆಂಗಳೂರು,ಮಾ.17(ಕೆಎಂಶಿ)-ಹೈಕಮಾಂಡ್ ಭಯ ಕಾಂಗ್ರೆಸ್‍ಗೆ, ನಮಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿರು ಗೇಟು ನೀಡಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಮುಖ್ಯ ಮಂತ್ರಿಗಳು ನೀಡಿರುವ ಉತ್ತರಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೇಂದ್ರ ಸರ್ಕಾರದಿಂದ ಸಾಕಷ್ಟು ಪ್ರಮಾಣದಲ್ಲಿ ಅನುದಾನ ರಾಜ್ಯಕ್ಕೆ ಬರುತ್ತಿಲ್ಲ, ಇದನ್ನು ಕೇಳುವ ಧೈರ್ಯ ಮುಖ್ಯಮಂತ್ರಿ ಅವರಿಗೆ ಇಲ್ಲ ಎಂದು ಟೀಕಿಸಿದರು.

ತಕ್ಷಣವೇ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಕೇಂದ್ರ ದಿಂದ ಯಾವುದೇ ರೀತಿಯ ಅನ್ಯಾಯವಾಗಿಲ್ಲ, ರಾಜ್ಯಕ್ಕೆ ನೀಡಬೇಕಿದ್ದ ಹಣಕ್ಕಿಂತ ಹೆಚ್ಚು ಬಿಡುಗಡೆ ಮಾಡಿದ್ದಾರೆ ಎಂದರು. ನಾವು ಕೇಳುವುದಕ್ಕಿಂತ ಅವರೇ ಹೆಚ್ಚಾಗಿ ಕೊಟ್ಟ ಮೇಲೆ ಮತ್ತೆ ಬೇಡಿಕೆ ಇಡಲು ಸಾಧ್ಯವೇ, ಅಗತ್ಯ ಕಂಡರೆ ಮನವಿ ಮಾಡುತ್ತೇವೆ, ಇದಕ್ಕೆ ನಿಮ್ಮ ರೀತಿ ಭಯಪಡುವ ಅಗತ್ಯವಿಲ್ಲ. ನಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ, ವರಿಷ್ಠರು ಬೆನ್ನು ತಟ್ಟುತ್ತಾರೆ. ನಿಮ್ಮವರ ರೀತಿ ಕಾಲೆಳೆಯುವುದಿಲ್ಲ. ನಿಮ್ಮಲ್ಲಿರುವ ದ್ವಂದ್ವಗಳಿಂದಲೇ ರಾಷ್ಟ್ರದ ಯಾವೊಂದು ಕ್ಷೇತ್ರದಲ್ಲೂ ಗೆಲುವು ಸಾಧಿಸಲು ನಿಮಗೆ ಆಗುತ್ತಿಲ್ಲ. ಸೋತು ಕುಳಿತಿರುವ ಹೈಕಮಾಂಡ್ ಮುಂದೆ ನೀವು ಸಲಾಮ್ ಹೊಡೆಯುತ್ತೀರಿ, ನಿಮ್ಮದು ಎಂತಹ ಧೈರ್ಯ ಎಂಬುದು ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕರನ್ನು ಚುಚ್ಚಿದರು. ಧೈರ್ಯದ ಬಗ್ಗೆ ನಮಗೆ ಹೇಳಿಕೊಡ ಬೇಡಿ, ನಮ್ಮಲ್ಲಿ ಯಾವುದೇ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವ ಪ್ರಜಾಪ್ರಭುತ್ವವಿದೆ. ಇಂತಹ ಶಕ್ತಿ ನಿಮಗಿದೆಯೇ ಎಂದು ಪ್ರಶ್ನಿಸಿದರು.

ನಮ್ಮಲ್ಲಿರುವ ಆಂತರಿಕ ಸ್ವಾತಂತ್ರ್ಯದಲ್ಲಿ ನಿಮಗೆ ಸ್ವಲ್ಪ ಇದ್ದರೂ ನಿಮ್ಮ ಪಕ್ಷಕ್ಕೆ ಇಂತಹ ಹೀನಾಯ ಸೋಲು ಬರುತ್ತಿರಲಿಲ್ಲ. ನಮ್ಮ ಬಗ್ಗೆ ಮಾತನಾಡಲು ನಿಮಗೆ ಯಾವುದೇ ನೈತಿಕತೆ ಇಲ್ಲ, ಡಬ್ಬಲ್ ಇಂಜಿನ್ ಸರ್ಕಾರ ಇರುವುದರಿಂದಲೇ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲೇ ಎಲ್ಲಾ ಅಂಕಿ-ಅಂಶಗಳನ್ನು ಸದನದ ಮುಂದಿಟ್ಟಿದ್ದರೂ ನಿಮಗೆ ತೃಪ್ತಿ ಇಲ್ಲ ಎಂದರು.