ಹಿಜಾಬ್: ಫೆ.21ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಫೆ. 18-ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮ ವಾರಕ್ಕೆ (ಫೆ. 21) ಮುಂದೂಡಲಾಗಿದೆ. ಇಂದು ಸರ್ಕಾ ರದ ಪರವಾಗಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದು, ಅವರು ಸೋಮವಾರವೂ ತಮ್ಮ ವಾದವನ್ನು ಮುಂದುವರೆಸಲಿದ್ದಾರೆ.

ಉಡುಪಿ ಕಾಲೇಜಿನ ಘಟನೆಗೆ ಸಂಬಂಧಿಸಿದಂತೆ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಸಮರ್ಥಿಸಿ ವಾದ ಮಂಡಿಸಿದ ಪ್ರಭುಲಿಂಗ ನಾವದಗಿ 2013ರಲ್ಲೇ ಸಮವಸ್ತ್ರ ನಿರ್ಣಯವನ್ನು ರಾಜ್ಯ ಸರ್ಕಾರದಿಂದ ಅಂಗೀಕರಿಸಲಾಗಿದೆ ಎಂದು ತಿಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಗೆ ಕಾನೂನಿನ ಮಾನ್ಯತೆ ಇದೆ. ಈ ಸಮಿತಿಯಲ್ಲಿ ಶಾಸಕರಲ್ಲದೇ ಉಪನ್ಯಾಸಕರು, ವಿದ್ಯಾರ್ಥಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳಿರುತ್ತಾರೆ ಎಂದರು.

ಉಡುಪಿ ಕಾಲೇಜಿನಲ್ಲಿ 1985ರಿಂದಲೂ ಸಮವಸ್ತ್ರ ಸಂಹಿತೆ ಜಾರಿಯಲ್ಲಿದೆ. 2018ರಲ್ಲಿ ಹೆಣ್ಣು ಮಕ್ಕಳಿಗೆ ವಸ್ತ್ರ ಸಂಹಿತೆ ರೂಪಿಸಲಾಗಿದೆ. 2021ರ ಡಿಸೆಂಬರ್ ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಉಡುಪಿ ಪಿಯು ಕಾಲೇಜು ವಿದ್ಯಾರ್ಥಿ ನಿಯರ ಕಾಲೇಜಾಗಿದ್ದು, 2021ರ ಡಿಸೆಂಬರ್‍ನಲ್ಲಿ ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು. ನಂತರ 2022ರ ಜನವರಿ 1ರಂದು ಕಾಲೇಜು ಅಭಿವೃದ್ಧಿ ಸಭೆ ಸೇರಿ ನಿರ್ಣಯ ಕೈಗೊಂಡಿತು. ಕಾಲೇಜಿನಲ್ಲಿ ಶಿಸ್ತು, ಸಮಾನತೆ ಇರಲೆಂದು ಸಮವಸ್ತ್ರ ಸಂಹಿತೆ ಜಾರಿ ಮಾಡಿರುವುದಕ್ಕೆ ಕಾಲೇಜು ಅಭಿವೃದ್ಧಿ ಸಮಿತಿ ನಡಾವಳಿಯಲ್ಲಿ ದಾಖಲೆ ಇದೆ. ಸಮವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿನಿಯರು ಮತ್ತು ಪೋಷಕರು ವಿರೋಧಿಸಿದ ಕಾರಣದಿಂದ ಸರ್ಕಾರ ಮಧ್ಯ ಪ್ರವೇಶಿಸಬೇಕಾಯಿತು. ಉನ್ನತ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಸಮವಸ್ತ್ರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಸೂಚಿಸಿದ್ದರೂ ಕಾಲೇಜುನಲ್ಲಿ ಪ್ರತಿಭಟನೆ ಮುಂದುವರೆಯಿತು. ಉಡುಪಿ ಕಾಲೇಜಿನ ವಿವಾದ ಇಡೀ ರಾಜ್ಯಕ್ಕೆ ವ್ಯಾಪಿಸಿದ್ದರಿಂದ ಸರ್ಕಾರ ಆದೇಶ ಹೊರಡಿಸಬೇಕಾಯಿತು ಎಂದು ಪ್ರಭುಲಿಂಗ ನಾವದಗಿ ವಾದಿಸಿದರು. ನ್ಯಾಯಾಲಯವು ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಿದ್ದು, ಅಂದೂ ಕೂಡ ಪ್ರಭುಲಿಂಗ ನಾವದಗಿ ತಮ್ಮ ವಾದವನ್ನು ಮುಂದುವರೆಸಲಿದ್ದಾರೆ.