ನನಗೆ ಕ್ಷೇತ್ರದ ಸಮಸ್ಯೆ ಇಲ್ಲ; ಆದರೆ ಎಲ್ಲಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಬೇಕಷ್ಟೇ…

ನಾನು ಎಲ್ಲಿಂದ ಚುನಾವಣೆಗೆ ನಿಲ್ಲಬೇಕು ಎಂದು ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಜೆಡಿಎಸ್ ಪಕ್ಷ ಅಲ್ಲ. ಆತ್ಮೀಯನಾಗಿ ಬೇಕಾದರೆ ವೈಯಕ್ತಿಕವಾಗಿ ಭೇಟಿ ಮಾಡಿ ಸಲಹೆ ನೀಡಲಿ. ಹಾಲಿ ಶಾಸಕರ ಟಿಕೆಟ್ ತಪ್ಪಿಸಿ ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಟಿಕೆಟ್ ನೀಡಿದ್ದೆವು. ಆದರೆ ಭದ್ರಾವತಿಯಲ್ಲಿ ಡೆಪಾಸಿಟ್ ಕಳೆದುಕೊಂಡಿದ್ದರು ಅಂದರೆ ಅವರ ಲೆಕ್ಕಾಚಾರ ಸರಿಯಿಲ್ಲ ಎಂದರ್ಥವಲ್ಲವೇ? ನನ್ನ ಜೊತೆ ಇಷ್ಟೊಂದು ಜನ ಶಾಸಕರು, ಪಕ್ಷದ ಹಿರಿಯ ನಾಯಕರು, ಎಲ್ಲಾ ಜಾತಿ ಧರ್ಮಗಳ ನಾಯಕರು ಇದ್ದಾರೆ. ಒಬ್ಬಂಟಿಯಾಗಿದ್ದರೆ ಇವರೆಲ್ಲ ನನ್ನ ಜೊತೆ ಇಲ್ಲಿ ಇರುತ್ತಿದ್ದರಾ? ಜನಾರ್ದನ ರೆಡ್ಡಿಯವರು ಕಾಂಗ್ರೆಸ್ ಸೇರುವ ಬಗ್ಗೆ ನಮ್ಮ ಜೊತೆ ಮಾತನಾಡಿಲ್ಲ. ಈ ಬಗ್ಗೆ ಮಾತುಕತೆ ನಡೆಸದೆ ಸುಮ್ಮನೆ ಏನೋ ಉತ್ತರ ಕೊಡೋಕೆ ಬರಲ್ಲ. -ಸಿದ್ದರಾಮಯ್ಯ, ವಿಪಕ್ಷ ನಾಯಕ

ಬೆಂಗಳೂರು ನ. 7(ಕೆಎಂಶಿ)- ಮುಂಬರುವ ವಿಧಾನಸಭಾ ಚುನಾ ವಣೆಯಲ್ಲಿ ಸ್ಪರ್ಧಿಸಲು ನನಗೆ ಕ್ಷೇತ್ರದ ಸಮಸ್ಯೆ ಇಲ್ಲ. ಆದರೆ ನಾನು ಎಲ್ಲಿ ಸ್ಪರ್ಧಿಸಬೇಕು ಎನ್ನು ವುದರ ಬಗ್ಗೆ ಮುಂದಿನ ದಿನಗಳಲ್ಲಿ ಬಹಿರಂಗ ಪಡಿಸುವುದಾಗಿ ವಿಧಾನಸಭೆಯ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂಬುದರ ಬಗ್ಗೆ ಚರ್ಚೆ ನಡೆದಿದೆ. ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ವಿಧಾನ ಸಭೆಗೆ ಆಯ್ಕೆಯಾಗುತ್ತೇನೆ. ಆಡಳಿತಾರೂಢ ಬಿಜೆಪಿಗೆ ಮಾಡಲು ಕೆಲಸವಿಲ್ಲ. ನಾನು ಸ್ಪರ್ಧಿಸುವ ವಿಚಾರದ ಬಗ್ಗೆ ಅಪಪ್ರಚಾರ ಮಾಡಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ದೂರಿದರು.

ನನಗೆ ಕ್ಷೇತ್ರದ ಕೊರತೆ ಇದ್ದರೆ ನಮ್ಮಲ್ಲಿ ಸ್ಪರ್ಧಿಸಿ ಎಂಬ ಆಹ್ವಾನ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ. ವರುಣಾ, ಕೋಲಾರ, ಚಾಮರಾಜಪೇಟೆ, ಬಾದಾಮಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನನಗೆ ಆಹ್ವಾನವಿದೆ. ನನಗೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರವೇ ಇಲ್ಲದೆ ಹೋದರೆ ನನ್ನನ್ನು ಬೇರೆ ಕಡೆಗಳಲ್ಲಿ ಬಂದು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಕರೆಯುತ್ತಾರಾ? ಎಂದು ಪ್ರಶ್ನಿಸಿದರು.

ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ನನಗೆ ಒತ್ತಾಯ ಮಾಡುತ್ತಿದ್ದಾರೆ. ಸಾವಿರಾರು ಜನ ಮಹಿಳೆಯರು ಬಂದು ನಮ್ಮ ಮುಂದೆ ಕೂತುಕೊಳ್ತೇವೆ ಎಂದು ನಾಯಕರುಗಳು ಪತ್ರ ಬರೆದಿದ್ದಾರೆ. ಆದರೆ ನನ್ನ ಯೋಚನೆ ಏನೆಂದರೆ ಪ್ರತಿ ವಾರಕ್ಕೊಮ್ಮೆ ಬಾದಾಮಿ ಕ್ಷೇತ್ರಕ್ಕೆ ಭೇಟಿ ನೀಡಿ, ಕಾರ್ಯಕರ್ತ ರನ್ನು ಭೇಟಿಯಾಗಿ, ಜನರ ಸಮಸ್ಯೆಗಳಿಗೆ ತತ್‍ಕ್ಷಣದಲ್ಲಿ ಸ್ಪಂದನೆ ನೀಡಲು ಸಾಧ್ಯವಾಗುವುದಿಲ್ಲ ಎಂದರು.

ಆದರೆ ಜನ ನೀವು ನಿರಂತರ ಭೇಟಿ ನೀಡದಿದ್ದರೂ ಪರ ವಾಗಿಲ್ಲ ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಹೇಳಬಹುದು. ಆದರೆ ನನ್ನ ಮನಸ್ಸು ಇದಕ್ಕೆ ಒಪ್ಪುತ್ತಿಲ್ಲ. ನಾನು ಬಾದಾಮಿಗೆ ಹೋಗದೆ 2 ತಿಂಗಳು ಕಳೆದಿದೆ. ನಾಳೆ ಭೇಟಿ ನೀಡಬೇಕು ಎಂದುಕೊಂಡಿದ್ದೆ ಬೇರೆ ಯಾವುದೋ ತುರ್ತು ಕೆಲಸ ಬಂದಿ ರುವುದರಿಂದ ನಾಳೆಯೂ ಹೋಗಲು ಆಗಲ್ಲ ಎಂದರು.

ಕೋಲಾರದಿಂದ ಸ್ಪರ್ಧೆ ಮಾಡಿ ಎಂದು ಕರೆಯುತ್ತಿ ದ್ದಾರೆ. ವರುಣಾದಿಂದ ಸ್ಪರ್ಧೆಮಾಡಿ ಎಂದು ನನ್ನ ಪುತ್ರ ಡಾ. ಯತೀಂದ್ರ ಹೇಳುತ್ತಿದ್ದಾರೆ. ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡುವಂತೆ ಜಮೀರ್ ಅಹಮದ್ ಕರೆಯುತ್ತಿದ್ದಾರೆ, ಹೀಗೆ ಬೇರೆ ಬೇರೆ ಕಡೆಗಳಿಂದ ಸ್ಪರ್ಧೆಗೆ ಆಹ್ವಾನ ಬರುತ್ತಿದೆ. ಎಲ್ಲಿಂದ ನಿಲ್ಲಬೇಕು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಅಮಿತ್ ಶಾ ಈ ಹಿಂದೆ ಗಡಿಪಾರಾಗಿದ್ದವರು. ಅವರೀಗ ದೇಶದ ಗೃಹ ಸಚಿವರಾಗಿದ್ದಾರೆ, ಕೊಲೆ ಆರೋಪ ಇರುವವರು ಬೇಕಾದಷ್ಟು ಜನ ಶಾಸಕರಾಗಿದ್ದಾರೆ, ಸಂಸದರಾಗಿದ್ದಾರೆ. ಎಲ್ಲಿಯವರೆಗೂ ಅವರು ಅಪರಾಧಿ ಎಂದು ಸಾಬೀತಾಗುವು ದಿಲ್ಲವೋ ಅಲ್ಲಿಯವರೆಗೆ ಅವರು ಅಮಾಯಕರು. ಅಪರಾಧಿ ಸ್ಥಾನದಲ್ಲಿ ಇರುವವರು ತಪ್ಪಿತಸ್ಥರಲ್ಲ ಎಂದು ಕ್ರಿಮಿನಲ್ ಕಾನೂನು ಹೇಳುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಿಎಂ ಇಬ್ರಾಹಿಂ ನನ್ನ ಒಳ್ಳೆಯ ಗೆಳೆಯ, ಆದರೆ ಅವರು ನಮ್ಮನ್ನು ಬಿಟ್ಟು ಜೆಡಿಎಸ್‍ಗೆ ಹೊರಟು ಹೋಗಿ ಅಧ್ಯಕ್ಷರಾಗಿ ದ್ದಾರೆ. ಅವರು ಭದ್ರಾವತಿಯಿಂದ ಬೇಕಾದರೆ ಸ್ಪರ್ಧೆ ಮಾಡಬಹುದು, ಅಲ್ಲಿ ಅಪ್ಪಾಜಿಗೌಡ ಅವರು ತೀರಿಹೋಗಿದ್ದಾರೆ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ನುಡಿದರು.