ಕನಕಪುರ-ಸೇಲಂ ಕರ್ನಾಟಕದ ಅತೀ ಉದ್ದದ ಸುರಂಗ ಮಾರ್ಗ

ಬೆಂಗಳೂರು, ಸೆ. 9(ಕೆಎಂಶಿ)-ಕರ್ನಾಟಕದ ಅತೀ ಉದ್ದದ ರೈಲ್ವೇ ಸುರಂಗ ಮಾರ್ಗ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಮ್ಮತಿಸಿದೆ.
ಇಂದಿಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮೂಲ ಸೌಕರ್ಯ ಸಚಿವ ವಿ.ಸೋಮಣ್ಣ ಕನಕಪುರದಿಂದ ತಮಿಳುನಾಡಿನ ಸೇಲಂಗೆ ಹೊಸ ರೈಲು ಸಂಪರ್ಕ ಕಲ್ಪಿಸುವ ಯೋಜನೆಯಡಿ ಈ ಸುರಂಗ ಮಾರ್ಗ ಬರಲಿದೆ ಎಂದರು. ಯೋಜ ನೆಗೆ ಸರ್ವೇಕಾರ್ಯ ಆರಂಭಗೊಂಡಿದ್ದು, ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು-ಈರೋಡ್ ಮೂಲಕ ಸೇಲಂಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ತಮಿಳುನಾಡಿನ ಈರೋಡ್ ನಡುವೆ ಅರಣ್ಯ ಪ್ರದೇಶ ಇರುವುದರಿಂದ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ನೆಲದಡಿ ಸುರಂಗ ಮಾರ್ಗದ ಮೂಲಕ ಒಂಭತ್ತು ಕಿಲೋಮೀಟರ್‍ಗಳಷ್ಟು ದೂರ ರೈಲು ಸಂಚರಿಸಲಿದೆ. ರಾಜ್ಯದ ಮೊಟ್ಟಮೊದಲ
ಅತೀ ಉದ್ದದ ಈ ಸುರಂಗ ಮಾರ್ಗ ಅತ್ಯಂತ ಆಧುನಿಕವಾಗಿ ನಿರ್ಮಾಣ ಗೊಳ್ಳಲಿದೆ. ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಮೆಟ್ರೋ ಸುರಂಗ ಮಾರ್ಗಕ್ಕೆ ಅನುಸರಿಸಿದ ತಂತ್ರಜ್ಞಾನ ವನ್ನು ಇಲ್ಲಿಯೂ ಅನುಸರಿಸುತ್ತೇವೆ ಎಂದರು. ಕಾಡು ಉಳಿಸುವುದು ಮತ್ತು ಪರಿಸರಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಈ ಸುರಂಗ ನಿರ್ಮಾಣ ವಾಗಲಿದೆ ಎಂದ ಅವರು, ಈ ಸುರಂಗ ಕೂಡ ಅರಣ್ಯ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಾಗಲಿದೆ ಎಂದು ವಿವರಿಸಿದರು. ಯೋಜನೆ ಅನುಷ್ಠಾನಗೊಂಡ ನಂತರ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅರವತ್ತೆರಡು ಕಿಲೋಮೀಟರ್ ಗಳಷ್ಟು ದೂರ ಕಡಿಮೆಯಾಗಲಿದೆ ಎಂದರು. ಕೇರಳದ ತಲ್ಲಚೇರಿಯಿಂದ ಚಾಮರಾಜನಗರಕ್ಕೆ ರೈಲು ಸಂಪರ್ಕಿಸುವ ಯೋಜನೆಗೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಕೇರಳದ ಪ್ರಸ್ತಾಪ: ಈ ಮಾರ್ಗದಲ್ಲಿ ನಾಗರಹೊಳೆ ಮತ್ತು ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದ ಇಪ್ಪತ್ತೆರಡು ಕಿಮೀ ಉದ್ದದಷ್ಟು ರೈಲ್ವೇ ಸುರಂಗ ಮಾರ್ಗವನ್ನು ರೂಪಿಸಲು ಕೇರಳ ಸರ್ಕಾರ ಯೋಜನೆ ರೂಪಿಸಿ ಅನುಮತಿ ನೀಡಿದೆ. ಆದರೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಇಷ್ಟು ಬೃಹತ್ ಗಾತ್ರದ ಸುರಂಗ ಮಾರ್ಗ ನಿರ್ಮಿಸುವುದು ಸುರಕ್ಷಿತವಲ್ಲ, ಹಾಗೊಂದು ವೇಳೆ ಇದರ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅರಣ್ಯ ಪ್ರದೇಶಕ್ಕೆ ಧಕ್ಕೆ ಆಗುತ್ತದೆ. ವನ್ಯ ಜೀವಿಗಳಿಗೆ ಹಾನಿಯಾಗುತ್ತದೆ.