ಎತ್ತಿನಹೊಳೆ ಯೋಜನೆ ಭೂಸ್ವಾಧೀನ ಅಡೆತಡೆ ನಿವಾರಣೆಗೆ ಶೀಘ್ರವೇ ಸಭೆ

ಬೆಂಗಳೂರು, ಸೆ. 14(ಕೆಎಂಶಿ)- ಎತ್ತಿನಹೊಳೆ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಸದ್ಯದಲ್ಲೇ ಸಭೆ ಕರೆಯುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನ ಸಭೆಗೆ ಮಂಗಳವಾರ ತಿಳಿಸಿದ್ದಾರೆ.

ಕೊರಟಗೆರೆ ಶಾಸಕ ಡಾ|| ಜಿ. ಪರಮೇಶ್ವರ ಅವರು, ಎತ್ತಿನಹೊಳೆ ಯೋಜನೆಯ ಬೈರ ಗೊಂಡ್ಲು ಜಲಾಶಯದ ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆಗಳ ಕುರಿತು ಪ್ರಶ್ನೋತ್ತರ ವೇಳೆಯಲ್ಲಿ ಜಲ ಸಂಪನ್ಮೂಲ ಸಚಿವರು ನೀಡಿದ ಉತ್ತರಕ್ಕೆ ಧ್ವನಿಗೂಡಿಸಿ ಎತ್ತಿನಹೊಳೆಯಿಂದ ನೀರು ಎತ್ತಿಯೇ ತೀರುತ್ತೇವೆ ಎಂದು ತಿಳಿಸಿದರು. ಇತ್ತೀಚೆಗೆ ತಾವು ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಭೇಟಿ ನೀಡಿ, ಭೂಸ್ವಾಧೀನ ಸೇರಿದಂತೆ ಯೋಜನೆಯ ಅಡ್ಡಿ-ಆತಂಕಗಳನ್ನು ನಿವಾರಿಸಲು ಅಗತ್ಯ ಕ್ರಮಕೈಗೊಂಡ ಪ್ರಯತ್ನದ ಫಲವಾಗಿ ಎರಡು ಬಹುದೊಡ್ಡ ಅಡೆತಡೆಗಳು ನಿವಾರಣೆಯಾಗಿದ್ದು, ಒಂದೆರಡು ತಿಂಗಳಲ್ಲಿ ಎತ್ತಿನಹೊಳೆಯಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಎತ್ತಿನಹೊಳೆಯಂತಹ ಮಹತ್ವಾಕಾಂಕ್ಷಿ ಕುಡಿಯುವ ನೀರಿನ ಯೋಜನೆಗೆ ಇರುವ ಅಡ್ಡಿ ಆತಂಕ ಪರಿಹರಿಸಿ ತಕ್ಷಣ ಕ್ರಮ ಕೈಗೊಳ್ಳಲು ಕಾರ್ಯಪ್ರವೃತ್ತವಾಗಿದ್ದು, ಆದಷ್ಟು ಬೇಗ ಫಲಿತಾಂಶ ನಿಮಗೆ ಕಾಣಲಿದೆ ಎಂದರು. ಭೂಸ್ವಾಧೀನ ಪ್ರಕ್ರಿಯೆಗೆ 195 ಕೋಟಿ ರೂ. ಒದಗಿಸಲಾಗಿದ್ದರೂ, ಕೆಲವು ಅಧಿಕಾರಿಗಳು ರೈತರಿಗೆ ಹಣವಿಲ್ಲವೆಂದು ಹೇಳುತ್ತಿದ್ದರು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ಪ್ರಕರಣಗಳಲ್ಲಿ ರೈತರಿಗೆ ಹಣ ಪಾವತಿ ಮಾಡುವುದು ವಿಳಂಬವಾದಲ್ಲಿ ಭೂಸ್ವಾಧೀನ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರ ರನ್ನಾಗಿಸಲಾಗುವುದು ಎಂದು ವಿವರಿಸಿ ದರು. ಕೊರಟಗೆರೆ ಮತ್ತು ದೊಡ್ಡಬಳ್ಳಾಪುರ ತಾಲೂಕಿನ ರೈತರ 5078 ಎಕರೆ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಏಕ ರೂಪದ ದರ ನಿಗದಿಪಡಿಸುವಲ್ಲಿ ಸಮಸ್ಯೆಗಳಿದ್ದು, ಇದರ ಪರಿಹಾರಕ್ಕೆ 2018ರಲ್ಲಿ ಅಂದಿನ ಉಪಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ ನೇತೃತ್ವದ ಸಚಿವ ಸಂಪುಟದ ಉಪಸಮಿತಿ ಸಭೆ ನಡೆದಿದ್ದರೂ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲಾಗ ಲಿಲ್ಲ, ಈಗಿನ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಚಿವರು ವಿವರ ನೀಡಿದರು. ಎತ್ತಿನಹೊಳೆ ಯೋಜನೆಯ ಅನುಷ್ಠಾನದಲ್ಲಿ ಸಣ್ಣ-ಪುಟ್ಟ ಅಡ್ಡಿಗಳನ್ನು ನಿವಾರಿಸಿಕೊಂಡು ಮುಂದಿನ ಹೆಜ್ಜೆ ಇರಿಸಲಾಗುವುದು, ಆದಷ್ಟು ಶೀಘ್ರ ಯೋಜನೆ ಸಾಕಾರಕ್ಕೆ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.