ಮೈಸೂರು-ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಹಸಿರು ನಿಶಾನೆ

ಬೆಂಗಳೂರು, ಮಾ.4(ಕೆಎಂಶಿ)-ಮೈಸೂರು-ಬೆಂಗ ಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-2023ನೇ ಸಾಲಿನ ಮುಂಗಡ ಪತ್ರದಲ್ಲಿ ಮೈಸೂರು ವಿಭಾಗಕ್ಕೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರವು 460 ಕಿಲೋ ಮೀಟರ್ ಉದ್ದದ ಈ ಮೂರು ನಗರಗಳನ್ನು ಸಂಪರ್ಕಿಸುವ ಮತ್ತು ಪ್ರಯಾಣಿಕರಿಗೆ ತ್ವರಿತಗತಿಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳ ತಲುಪಿಸಲು ಹೈಸ್ಪೀಡ್ ರೈಲ್ ಕಾರಿಡಾರ್ ನಿರ್ಮಿಸಲು ಮುಂದಾಗಿದೆ. ರಾಷ್ಟ್ರೀಯ ಹೈಸ್ಪೀಡ್ ರೈಲ್ವೆ ಪ್ರಾಜೆಕ್ಟ್, ವಿಸ್ತøತ ಯೋಜನಾ ವರದಿಯನ್ನು ಸಿದ್ಧಪಡಿಸಿದ್ದು, ಇದರ ಅನು ಷ್ಠಾನಕ್ಕಾಗಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಕೈಜೋಡಿ ಸಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರು ನಂತರ ಮೈಸೂರು ನಗರದ ಹೊರ ವಲಯದಲ್ಲಿ ಕೈಗಾರಿಕಾಭಿವೃದ್ಧಿ ಜೊತೆಗೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಮೈಸೂರು ವಿಮಾನ ನಿಲ್ದಾಣದ ರನ್‍ವೇಯನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ ಏಳು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುತ್ತಿದ್ದು, ಚಾಮರಾಜನಗರ, ಕೊಡಗು, ಹಾಸನ ಅಲ್ಲದೆ, ಬೀದರ್, ಹಾವೇರಿ, ಕೊಪ್ಪಳ ಮತ್ತು ಬಾಗಲಕೋಟೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಈ ವಿಶ್ವ ವಿದ್ಯಾಲಯಗಳು ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಕಾರ್ಯ ನಿರ್ವಹಿಸಲಿವೆ. ಸ್ನಾತಕೋತ್ತರ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸುವ ಈ ವಿವಿಗಳಿಗೆ ವಾರ್ಷಿಕ ತಲಾ 2 ಕೋಟಿ ರೂ.ಗಳ ಆವರ್ತಕ ವೆಚ್ಚ ಬಳಸಿ ಕಾರ್ಯನಿರ್ವಹಿಸಲಿವೆ. ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ನಮ್ಮ ಸರ್ಕಾರ ನಿರ್ಧರಿಸಿದ್ದು, ಮುಂದಿನ 2 ವರ್ಷಗಳವರೆಗೆ ಪ್ರಾಯೋಗಿಕವಾಗಿ ಸರ್ಕಾರದ ವತಿಯಿಂದ ಕಾರ್ಖಾನೆಯನ್ನು ನಡೆಸಲಾಗುವುದು.

ಸ್ಥಗಿತಗೊಂಡಿರುವ ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ತಿಗಾಗಿ 50 ಕೋಟಿ ರೂ. ಒದಗಿಸುವುದಲ್ಲದೆ, ಹಣಕಾಸು ಸಂಸ್ಥೆಗಳಿಂದ ದುಡಿಯುವ ಬಂಡವಾಳ ಪಡೆಯಲು ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸುಮಾರು 30 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಮೈಸೂರು ದಿ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಪ್ಲಗ್ ಅಂಡ್ ಪ್ಲೇ ಸೌಲಭ್ಯವನ್ನು ಎರಡು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದಿರುವ ಮುಖ್ಯಮಂತ್ರಿಗಳು, ಮೈಸೂರು ಅರಮನೆಯ ಎಆರ್-ವಿಆರ್ ತುಣುಕುಗಳನ್ನು 15 ಕೋಟಿ ರೂ. ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಲಾಗಿದೆ ಎಂದರು. ಬೆಂಗಳೂರಿನಿಂದ ಹೊರಗೆ ಸ್ಟಾರ್ಟ್‍ಅಪ್‍ಗಳನ್ನು ಉತ್ತೇಜಿಸಲು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‍ನಿಂದ ನಿರ್ವಹಿಸಲಾಗುವ ಕ್ಲಸ್ಟರ್‍ಗೆ 20 ಕೋಟಿ ರೂ.ಗಳಂತೆ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಫಾರ್ ಸ್ಟಾರ್ಟ್‍ಅಪ್ ಸಂಸ್ಥೆ ಸ್ಥಾಪಿಸಲಾಗುವುದು. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಅನುದಾನ ನೀಡಲಾಗಿದೆ. ಕೊಡಗು ಮತ್ತು ಜಾಂಬೋಟಿ ಜೇನುತುಪ್ಪಗಳನ್ನು ಜನಪ್ರಿಯಗೊಳಿಸಲು ಹಾಗೂ ಉತ್ಪಾದನೆ ಹೆಚ್ಚಿಸಲು ಸುಧಾರಿತ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿ ಬ್ರ್ಯಾಂಡಿಂಗ್ ಮೂಲಕ ಜಾಗತಿಕ ಮಟ್ಟಕ್ಕೇರಿಸಲು 5 ಕೋಟಿ ರೂ. ನೀಡಿದ್ದಾರೆ. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು (ಎಂಎಂಸಿಆರ್‍ಐ) 2024ರಲ್ಲಿ ಶತಮಾನೋತ್ಸವ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ಕೆ.ಆರ್. ಆಸ್ಪತ್ರೆಯ ಕಟ್ಟಡಗಳ ನವೀಕರಣವನ್ನು ಮುಂದಿನ ಮೂರು ವರ್ಷಗಳಲ್ಲಿ 89 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು.