ರಾಷ್ಟ್ರೀಯ ಚಲನಚಿತ್ರ ಅವಾರ್ಡ್: ಶ್ರೀದೇವಿಗೆ ಮರಣೋತ್ತರ ಅತ್ಯುತ್ತಮ ನಟಿ ಪ್ರಶಸ್ತಿ

ನವದೆಹಲಿ: ಇತ್ತೀಚೆಗೆ ಇಹಲೋಕ ತ್ಯಜಿಸಿದ ತ್ರಿಲೋಕ ಸುಂದರಿ ಬಾಲಿವುಡ್ ನಟಿ ಶ್ರೀದೇವಿ ಗೆ ಮರಣೋತ್ತರವಾಗಿ ನೀಡಲಾದ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ಯನ್ನು ಅವರ ಪತ್ನಿ ಬೋನಿ ಕಪೂರ್ ಹಾಗೂ ಮಕ್ಕಳಾದ ಜಾನವಿ ಮತ್ತು ಖುಷಿ ಸ್ವೀಕರಿಸಿದರು.

ದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ಮರಣ ಹೊಂದಿದ್ದರು. ಹಿಂದಿ ಚಿತ್ರ ಮಾಮ್‍ನಲ್ಲಿನ ಅಮೋಘ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ನಟ ವಿನೋದ್ ಕುಮಾರ್ ಖನ್ನಾ ಅವರಿಗೆ ಮರಣೋತ್ತರವಾಗಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿನೋದ್ ಖನ್ನಾ ಅವರ ಪತ್ನಿ ಕವಿತಾ ಖನ್ನಾ ಮತ್ತು ಪುತ್ರ ಅಕ್ಷಯ್ ಖನ್ನಾ ಪ್ರಶಸ್ತಿ ಸ್ವೀಕರಿಸಿದರು. 11 ಪ್ರಶಸ್ತಿಗಳನ್ನು ಮಾತ್ರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದರು. ಉಳಿದ ಪ್ರಶಸ್ತಿಗಳನ್ನು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ವಿತರಿಸಿದರು.