ನೈಟ್ ಕಫ್ರ್ಯೂ, ವಾರಾಂತ್ಯ ಕಫ್ರ್ಯೂ ಮುಂದುವರೆಸಬೇಕೆ…? ಬೇಡವೇ…?

ಬೆಂಗಳೂರು, ಜ.19(ಕೆಎಂಶಿ)- ಕೋವಿಡ್-19 ಸೋಂಕಿನ ಮೇಲೆ ಹತೋಟಿ ಸಾಧಿಸಲು ಜಾರಿಯಲ್ಲಿರುವ ನೈಟ್ ಕಫ್ರ್ಯೂ ಹಾಗೂ ವಾರಾಂತ್ಯ ಕಫ್ರ್ಯೂವನ್ನು ಮುಂದುವರೆಸಬೇಕೇ, ಬೇಡವೇ ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬೆಳಿಗ್ಗೆ ಮಹತ್ವದ ಸಭೆ ಕರೆದಿದ್ದಾರೆ.

ಕಫ್ರ್ಯೂ ರದ್ದುಗೊಳಿಸುವಂತೆ ಉದ್ಯಮಿಗಳು ಹಾಗೂ ರಾಜ ಕಾರಣಿಗಳಿಂದ ಭಾರೀ ಒತ್ತಡ ಬರುತ್ತಿರುವ ಹಿನ್ನೆಲೆಯಲ್ಲಿ ಹಾಲಿ ನಿಯಮಾವಳಿಗಳನ್ನು ಸಡಿಲಿಸುವ ಸಂಬಂಧ ಸಭೆ ನಡೆಯಲಿದೆ.

ಸಭೆಗೂ ಮುನ್ನ ತಜ್ಞರ ಸಲಹಾ ಸಮಿತಿ ಸರ್ಕಾರಕ್ಕೆ ನಾಳೆ ವರದಿ ನೀಡಲಿದೆ. ಉನ್ನತ ಮೂಲಗಳ ಪ್ರಕಾರ ಕಫ್ರ್ಯೂ ಮುಂದುವರೆಸು ವುದಕ್ಕೆ ಸಂಬಂಧಿಸಿದಂತೆ ಅವರಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಕೆಲವು ತಜ್ಞರು ಈ ಮಾಸಾಂತ್ಯದವರೆಗೂ ಯಥಾಸ್ಥಿತಿ ಮುಂದು ವರೆಯಲಿ ಎಂದಿದ್ದಾರೆ. ರಾಜ್ಯದಲ್ಲಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅಲ್ಲದೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯು ಏರಿಕೆ ಕಂಡಿದೆ. ಹಾಲಿ ನಿಯಮಾವಳಿಗಳನ್ನು ಮಾಸಾಂತ್ಯದವರೆಗೂ ಮುಂದುವರೆಸಿ, ಅದರ ಮಧ್ಯೆ ಸೋಂಕಿನ ಪ್ರಮಾಣ ಇಳಿಕೆ ಕಂಡರೆ ಮತ್ತೆ ಸಭೆ ಸೇರಿ ಸರ್ಕಾರ ತನ್ನ ನಿರ್ಧಾರ ಬದಲಾವಣೆ ಮಾಡಲಿ ಎಂದು ಒಂದು ವರ್ಗ ಹೇಳಿದರೆ, ಮತ್ತೊಂದು ವರ್ಗ ರಾಜ್ಯದಲ್ಲಿ ಕಾಣಿಸಿಕೊಂಡಿರುವುದು ಫ್ಲ್ಯೂ ಸೋಂಕು. ಈ ಸೋಂಕಿಗೆ ಒಳಪಟ್ಟವರು 2 ದಿನ ಚಿಕಿತ್ಸೆ ಪಡೆದುಕೊಂಡರೆ ಗುಣಮುಖ ರಾಗುತ್ತಾರೆ. ಈ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿದ್ದರೂ, ಯಾವುದೇ ಪ್ರಾಣ ಹಾನಿ ಇಲ್ಲ. ಮತ್ತು ಸೋಂಕಿಗೆ ಒಳಪಟ್ಟ ವರು ಎಂದಿನಂತೆ ತಮ್ಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿ ದ್ದಾರೆ. ಹಾಗಾಗಿ ಕಫ್ರ್ಯೂ ನಿಯಮಾವಳಿಗಳನ್ನು ರದ್ದು ಮಾಡಿ, ವಾಣಿಜ್ಯ ಚಟುವಟಿಕೆಗೆ ಮತ್ತು ಆರ್ಥಿಕ ಚೇತನಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಕೆಲವು ತಜ್ಞರು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ವರದಿಗಳೇ ಗೊಂದಲದಲ್ಲಿದೆ.

ಮುಖ್ಯಮಂತ್ರಿ, ತಜ್ಞರು ಹಾಗೂ ಅಧಿಕಾರಿಗಳೊಟ್ಟಿಗೆ ಚರ್ಚೆ ನಡೆಸಿದ ನಂತರ ಒಂದು ತೀರ್ಮಾನಕ್ಕೆ ಬರಲಿದ್ದಾರೆ. ಹಾಲಿ ವಾರಾಂತ್ಯದ ಕಫ್ರ್ಯೂ ಜನವರಿ 22ಕ್ಕೆ ಅಂತ್ಯಗೊಳ್ಳಲಿದೆ.