ಪೊಲೀಸರಿಗೆ ನೇತಾಜಿ ರಾಷ್ಟ್ರೀಯ ಪ್ರಶಸ್ತಿ 

ನವದೆಹಲಿ: ಯಾವುದೇ ರೀತಿಯ ಪ್ರಕೃತಿ ವಿಕೋ ಪದ ಸಂದರ್ಭದಲ್ಲಿ ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುವ ಪೊಲೀಸ್ ಸಿಬ್ಬಂದಿಗೆ ಇನ್ನು ಮುಂದೆ ಪ್ರತಿವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿ ‘ರಾಷ್ಟ್ರೀಯ ಪ್ರಶಸ್ತಿ’ ನೀಡಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದಿಲ್ಲಿ ಘೋಷಿಸಿದರು.

1943ರ ಅ.21ರಂದು ಭಾರತದ ಪ್ರಥಮ ಸ್ವತಂತ್ರ ಸರ್ಕಾರ  `ದಿ ಆಜಾದ್ ಹಿಂದ್ ಗೌರ್ನಮೆಂಟ್’ ರಚನೆ ಮಾಡಲಾಗಿದೆ ಎಂದು ಸುಭಾಷ್ ಚಂದ್ರಬೋಸ್ ಮಾಡಿದ ಘೋಷಣೆಯ 75ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕೆಂಪು ಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಈ ವಿಷಯ ಘೋಷಿಸಿದರು. ಯಾವುದೇ ರೀತಿಯ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಜನರ ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ಅನನ್ಯ ಸೇವೆಗೈಯ್ಯುವ ಪೊಲೀಸ್ ಸಿಬ್ಬಂದಿಗೆ ಈ ವರ್ಷದಿಂದ ನೇತಾಜಿ ಹೆಸರಿನಲ್ಲಿ ಪ್ರಶಸ್ತಿ ನೀಡ ಲಾಗುವುದು. ನೇತಾಜಿ ಜನ್ಮದಿನವಾದ ಜ.23ರಂದು ಪ್ರಶಸ್ತಿ ಪ್ರಕಟಿಸಲಾಗುವುದು ಎಂದು  ತಿಳಿಸಿದರು.

ಇದೇ ವೇಳೆ ರಾಷ್ಟ್ರೀಯ ಪೊಲೀಸ್ ಸ್ಮಾರಕ ಹಾಗೂ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದರು. ಯಾವುದೇ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಾಷ್ಟ್ರೀಯ ವಿಕೋಪ ಪರಿಹಾರ ಪಡೆ ಹಾಗೂ ರಾಜ್ಯ ವಿಕೋಪ ಪರಿಹಾರ ಪಡೆಗಳ ಸಿಬ್ಬಂದಿ ಮಾಡಿದ ಸೇವೆಯನ್ನು ದೇಶ ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದರು.

`ಎನ್‍ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಧೈರ್ಯಶಾಲಿ ಪೊಲೀಸರಾಗಿದ್ದಾರೆ. ಅವರು ಪೊಲೀಸ್ ಪಡೆಗಳಿಂದ ಬಂದವರು. ಕಟ್ಟಡ ಕುಸಿದಾಗ, ಬೆಂಕಿ ಆಕಸ್ಮಿಕ ಉಂಟಾ ದಾಗ ಅಥವಾ ರೈಲು ದುರಂತಗಳ ಸಂದರ್ಭಗಳಲ್ಲಿ ಜನರ ನೆರವಿಗೆ ಧಾವಿಸುವ ಇವರು ಯಾರು ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ’ ಎಂದರು. ಪೊಲೀಸರ ಈ ಸೇವಾ ಕಾರ್ಯ ನೆನೆದು ಅವರು ತುಸು ಭಾವುಕರಾದರು.