ಅಧಿಕಾರ ಶಾಶ್ವತವಲ್ಲ…

ಹಾವೇರಿ,ಡಿ.19-ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ `ಅಧಿಕಾರ ಶಾಶ್ವತ ಅಲ್ಲ’ ಎಂದು ಭಾವನಾತ್ಮಕವಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿ ರುವುದು ಈ ಮಾತುಗಳಿಗೆ ಪುಷ್ಟಿ ನೀಡಿದಂತಿದೆ.
ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಅಧಿಕಾರ ಹಾಗೂ ಸ್ಥಾನಮಾನ ಶಾಶ್ವತ ಅಲ್ಲ ಎಂದು ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿ ಸಿದೆ. ಅಲ್ಲದೇ ಭಾವನಾತ್ಮಕ ಭಾಷಣ ಬೊಮ್ಮಾಯಿ ರಾಜೀ ನಾಮೆಗೆ ಪೂರಕವಾಗಿದೆ. ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೆ ಎಂಬುದು ಗೊತ್ತಿಲ್ಲ. ಸ್ಥಾನ ಮಾನಗಳು ಶಾಶ್ವತವಲ್ಲ ಎಂದು ಹೇಳಿ ಬೊಮ್ಮಾಯಿ ಭಾವುಕರಾದರು. ನಿಮ್ಮೆಲ್ಲರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿಯೇ ಉಳಿಯು ತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ
ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನು ಏನೇ ಕೆಲಸ ಮಾಡಿ ದರೂ ಆ ಋಣ ತೀರಿಸಲು ಆಗುವುದಿಲ್ಲ ಎಂದು ಗದ್ಗದಿತರಾದರು. ಶಾಶ್ವತವಾಗಿ ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವ ನಾತ್ಮಕವಾಗಿ ಮಾತನಾಡಬಾರದು. ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲಾ ಸಮುದಾಯಗಳ ಭಾವನೆಗೆ ಸ್ಪಂದಿಸುವುದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನು ಎದುರಿಸಿಕೊಂಡು ಹೋಗಬೇಕಿದೆ ಎಂದು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದರು. ಎಲ್ಲ ಸಮುದಾಯದವರನ್ನೂ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನು ಉಳಿಸುವ ಕೆಲಸ ಮಾಡಿದರು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದರು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸ್ಫೂರ್ತಿ ಮಾತುಗಳನ್ನು ಆಡಿದರು. ಸಿಎಂ ತಮ್ಮ ಕಣ್ಣೀರಿನ ಭಾಷಣದ ಮೂಲಕ ರಾಜಕೀಯದಲ್ಲಿ ಮುಂದಿನ ಸುಳಿವು ಕೊಟ್ಟರಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ವಯಸ್ಸಿನ ಕಾರಣ ಮುಂದಿಟ್ಟು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಕ್ಕಿಳಿಸಿದ ಬಿಜೆಪಿ ಬೊಮ್ಮಾಯಿಗೆ ಪಟ್ಟ ಕಟ್ಟಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಇನ್ನೇನು ಎಲ್ಲವನ್ನೂ ಸರಿ ತೂಗಿಸಿಕೊಂಡು ಹೋಗುತ್ತಿದ್ದಾರೆ ಎಂದುಕೊಳ್ಳುವಾಗಲೇ ಮತ್ತೆ ಬೊಮ್ಮಾಯಿ ಪದತ್ಯಾಗದ ಮಾತು ಕೇಳಿಬಂದಿದೆ. ಆದರೆ ಈ ಬಾರಿ ರಾಜಕೀಯ ಕಾರಣವಿಲ್ಲದೇ ವೈಯಕ್ತಿಕ ಕಾರಣಕ್ಕೆ ಸಿಎಂ ರಾಜೀನಾಮೇ ನೀಡುತ್ತಾರೆ ಎಂಬುದು ಸದ್ಯ ತಿಳಿದು ಬಂದಿರುವ ಮಾಹಿತಿ. ಬಿಜೆಪಿ ಉಳಿದ ಒಂದೂವರೆ ವರ್ಷದ ಅವಧಿ ಹಾಗೂ ಮುಂದಿನ ಚುನಾವಣೆಗೆ ಸೂಕ್ತವಾಗುವ ನಾಯಕತ್ವಕ್ಕಾಗಿ ಹುಡುಕಾಟ ಆರಂಭಿಸಿದೆಯಂತೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಪ್ರಹಸನ ಜೋರಾಗುವ ಮುನ್ಸೂಚನೆ ಸಿಕ್ಕಿದ್ದು ಐದು ವರ್ಷದ ಅವಧಿಯ ಸರ್ಕಾರಕ್ಕೆ ಮೂರನೇ ಮುಖ್ಯಮಂತ್ರಿ ಖಚಿತ ಎನ್ನಲಾಗುತ್ತಿದೆ.