ಪ್ರಧಾನಿ ಮೋದಿ ತಾಯಿ ಆಸ್ಪತ್ರೆಗೆ ದಾಖಲು

ಅಹಮದಾಬಾದ್, ಡಿ. 28- ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅವರ ಆರೋಗ್ಯದಲ್ಲಿ ಏರುಪೇರಾ ಗಿದ್ದು, ಅಹಮದಾಬಾದ್‍ನ ಯುಎನ್ ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಅವರನ್ನು ದಾಖಲಿಸಲಾಗಿದೆ. ತಾಯಿ ಆಸ್ಪತ್ರೆಗೆ ದಾಖಲಾಗಿರುವುದು ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿಯವರು ಇಂದು ಸಂಜೆ ಅಹಮದಾಬಾದ್‍ಗೆ ಆಗಮಿಸಿ, ಆಸ್ಪತ್ರೆಗೆ ತೆರಳಿ ತಾಯಿಯ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು.
ಕಳೆದ ಜೂನ್ 18ರಂದು 100ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಅವರು ಮಂಗಳವಾರ ರಾತ್ರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಅವ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಯುಎನ್ ಮೆಹ್ತಾ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ. ಮೋದಿ ಅವರ ತಾಯಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಶಾಸಕ ದರ್ಶನಾ ಬೆನ್ ವಾಘೇಲಾ, ಕೌಶಿಕ್ ಜೈನ್ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಆಸ್ಪತ್ರೆಗೆ ತೆರಳಿ ಹೀರಾಬೆನ್ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.

ತಾಯಿಯವರು 100ನೇ ವರ್ಷಕ್ಕೆ ಕಾಲಿಟ್ಟಾಗ ಪ್ರಧಾನಿ ಮೋದಿ ಗಾಂಧಿನಗರದ ಅವರ ನಿವಾಸಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು, ಕೆಲಕಾಲ ಅವರೊಂದಿಗೆ ಕಾಲ ಕಳೆದಿದ್ದರು. ಅಲ್ಲದೇ, ತಮ್ಮ ತಾಯಿ 100ನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದ ಬಗ್ಗೆ ಮೋದಿ ತಮ್ಮ ಬ್ಲಾಗ್‍ನಲ್ಲಿ ಸುದೀರ್ಘವಾದ ಭಾವನಾತ್ಮಕ ಬರಹ ಬರೆದಿದ್ದರು. ಮೋದಿಯವರು ತಮ್ಮ ತಾಯಿ ಜೊತೆಗಿನ ಬಾಂಧವ್ಯದ ಬಗ್ಗೆ ಅನೇಕ ಬಾರಿ ಸಾರ್ವ ಜನಿಕವಾಗಿ ಮಾತನಾಡಿದ್ದರು. ಗುಜರಾತ್ ಚುನಾವಣೆ ವೇಳೆ ಅಹಮದಾಬಾದ್‍ಗೆ ಪ್ರಚಾರಕ್ಕಾಗಿ ತೆರಳಿದ್ದ ಮೋದಿಯವರು ಗಾಂಧಿನಗರದಲ್ಲಿರುವ ತಾಯಿ ಮನೆಗೆ ತೆರಳಿ, ಅವರೊಂದಿಗೆ ಚಹಾ ಸೇವಿಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿನ್ನೆ (ಮಂಗಳವಾರ) ಪ್ರಧಾನಿ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಮತ್ತು ಕುಟುಂಬದವರು ತೆರಳುತ್ತಿದ್ದ ಕಾರು ಬೆಂಗಳೂರು-ನೀಲಗಿರಿ ಹೆದ್ದಾರಿಯಲ್ಲಿ ಕಡಕೊಳ ಬಳಿ ಅಪಘಾತಕ್ಕೀಡಾ ಗಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯಂದಿಂದ ಪಾರಾಗಿದ್ದರು. ಈ ಅಪಘಾತದ ಸುದ್ದಿಯ ಆಘಾತದಿಂದ ಹೀರಾಬೆನ್ ಅವರ ಆರೋಗ್ಯದಲ್ಲಿ ಏರುಪೇರಾಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ರಾಹುಲ್ ಗಾಂಧಿ ಹಾರೈಕೆ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾರೈಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ತಾಯಿ ಮತ್ತು ಮಗನ ನಡುವಿನ ಪ್ರೀತಿ ನಿರಂತರ ಮತ್ತು ಬೆಲೆ ಕಟ್ಟಲಾಗದಂತಹದ್ದು. ಮೋದಿಯವರೇ, ಈ ಸಂಕಷ್ಟದ ಸಮಯದಲ್ಲಿ ನನ್ನ ಪ್ರೀತಿ ಹಾಗೂ ಬೆಂಬಲ ನಿಮಗಿದೆ. ನಿಮ್ಮ ತಾಯಿ ಆದಷ್ಟು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಆಶಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.