ಪ್ರಧಾನಿ ನಮನ

ನವದೆಹಲಿ, ಡಿ.9-ಊಟಿ ಬಳಿ ಬುಧವಾರ ವಾಯುಸೇನೆಯ ಹೆಲಿ ಕಾಪ್ಟರ್ ಪತನಗೊಂಡು ದುರ್ಮರಣ ಹೊಂದಿದ ಸೇನಾ ಪಡೆಗಳ ಮುಖ್ಯಸ್ಥ ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ 11 ಸೇನಾಧಿಕಾರಿಗಳ ಪಾರ್ಥಿವ ಶರೀರಗಳಿಗೆ ದೆಹಲಿಯ ಪಾಲಂ ವಾಯು ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಂತಿಮ ಗೌರವ ಸಲ್ಲಿಸಿದರು.

ಈ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮೂರೂ ಸೇನಾ ಪಡೆಗಳ ಮುಖ್ಯಸ್ಥರು
ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೃತರ ಕುಟುಂಬ ವರ್ಗದವರು ಕೂಡ ಹಾಜರಿದ್ದರು. ಇಂದು ಬೆಳಗ್ಗೆ ನೀಲಗಿರಿಯಿಂದ ಕೊಯಮತ್ತೂರಿನ ಸೂಲೂರು ವಾಯು ನೆಲೆಗೆ 13 ಪ್ರತ್ಯೇಕ ಆಂಬುಲೆನ್ಸ್‍ಗಳಲ್ಲಿ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲಾಯಿತು. ಆಂಬುಲೆನ್ಸ್‍ಗಳ ಮುಂಭಾಗ ಸುಮಾರು 8 ಪೊಲೀಸ್ ಜೀಪ್‍ಗಳು ಸಾಗಿದವು. ನೀಲಗಿರಿ ಮತ್ತು ಸೂಲೂರು ನಡುವೆ ಸುಮಾರು 91 ಕಿಲೋಮೀಟರ್ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಈ ರಸ್ತೆಯುದ್ದಕ್ಕೂ ಬರುವ ಗ್ರಾಮ ಹಾಗೂ ನಗರಗಳಲ್ಲಿ ಆಂಬುಲೆನ್ಸ್‍ಗಳ ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆಯ ಎರಡೂ ಬದಿಯಲ್ಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರ ಅಥವಾ ಗ್ರಾಮ ಪ್ರವೇಶಕ್ಕೆ ಸುಮಾರು 5 ಕಿ.ಮೀ. ಇರುವಾಗಲೇ ಆಂಬುಲೆನ್ಸ್‍ಗಳ ಆಗಮನದ ಬಗ್ಗೆ ಆಯಾ ಪೊಲೀಸ್ ಠಾಣೆಗಳಿಗೆ ವಯರ್‍ಲೆಸ್ ಮೂಲಕ ಮಾಹಿತಿ ಒದಗಿಸಲಾಗುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ಆಂಬುಲೆನ್ಸ್‍ಗಳು ಬರುತ್ತಿದ್ದಂತೆಯೇ ಅವುಗಳ ಮೇಲೆ ಹೂಮಳೆ ಸುರಿದರು. ಜೊತೆಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಅಲ್ಲಲ್ಲಿ ಸಾರ್ವಜನಿಕರಿಂದ `ಬಿಪಿನ್ ರಾವತ್ ಅಮರ್ ರಹೇ’ ಘೋಷಣೆಗಳು ಕೇಳಿಬಂದವು.

ಇದಕ್ಕೂ ಮುನ್ನ ನೀಲಗಿರಿಯ ಮದ್ರಾಸ್ ರೆಜಿಮೆಂಟ್ ಕೇಂದ್ರದಲ್ಲಿ ಮೃತರ ಪಾರ್ಥಿವ ಶರೀರಗಳಿಗೆ ಅಂತಿಮ ಗೌರವ ಸಲ್ಲಿಸಲಾಯಿತು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತೆಲಂಗಾಣ ಮತ್ತು ಪಾಂಡಿಚೇರಿ ರಾಜ್ಯಪಾಲೆ ತಮಿಳಿಸೈ ಸೌಂದರ ರಾಜನ್, ಏರ್ ಚೀಫ್ ಮಾರ್ಷಲ್ ವಿ.ಆರ್.ಚೌಧರಿ ಸೇರಿದಂತೆ ಹಲವು ಮುಖಂಡರು ಅಂತಿಮ ಗೌರವ ಸಲ್ಲಿಸಿದರು. ಇದೇ ವೇಳೆ ತಮಿಳುನಾಡು ಸರ್ಕಾರದ ಪರವಾಗಿಯೂ ಅಂತಿಮ ಗೌರವ ಸಲ್ಲಿಸಲಾಯಿತು. ಸೂಲೂರು ವಾಯು ನೆಲೆಯಿಂದ ಸಿ-130 ಜೆ ಹಕ್ರ್ಯುಲೆಸ್ ಯುದ್ಧ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ದೆಹಲಿಗೆ ರವಾನಿಸಲಾಯಿತು. ಇಂದು ರಾತ್ರಿ ಮೃತರ ಪಾರ್ಥಿವ ಶರೀರಗಳನ್ನು ಅವರವರ ಸ್ವಸ್ಥಳಗಳಿಗೆ ಯೋಧರು ಸೇನಾ ವಾಹನಗಳಲ್ಲಿ ಕೊಂಡೊಯ್ದರು. ನಾಳೆ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆಗಳು ನಡೆಯಲಿವೆ.

ಶುಕ್ರವಾರ ಬೆಳಗ್ಗೆ 11 ಗಂಟೆಗೆ ದೆಹಲಿಯ ಕಾಮರಾಜ್ ಮಾರ್ಗ್‍ನಲ್ಲಿರುವ ನಿವಾಸದಲ್ಲಿ ಸಿಡಿಎಸ್ ಬಿಪಿನ್ ರಾವತ್ ದಂಪತಿ ಭೌತಿಕ ಕಾರ್ಯ ಗಳು ನಡೆಯಲಿವೆ. ರಾವತ್ ದಂಪತಿಗೆ ಅಂತಿಮ ನಮನ ಸಲ್ಲಿಸಲು ಅವರ ಬಂಧು ವರ್ಗದವರಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗುತ್ತದೆ. 2 ಗಂಟೆ ನಂತರ ಕಾಮರಾಜ್ ಮಾರ್ಗ್‍ನಿಂದ ಬ್ರಾರ್ ವೃತ್ತದಲ್ಲಿರುವ ರುದ್ರಭೂಮಿವರೆಗೆ ಮೂರೂ ಸೇನಾ ಪಡೆಗಳ ಬ್ಯಾಂಡ್ ಜೊತೆಗೆ ಅಂತಿಮ ಯಾತ್ರೆ ನಡೆ ಯುತ್ತದೆ. ಸಂಜೆ 4 ಗಂಟೆಗೆ ಬ್ರಾರ್ ಕ್ರಿಮಿಟೋರಿ ಯಂನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಬಿಪಿನ್ ರಾವತ್ ದಂಪತಿ ಅಂತ್ಯಕ್ರಿಯೆ ನೆರವೇರಲಿದೆ.