ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಸಂವಿಧಾನದ ಒಂಭತ್ತನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕೇಂದ್ರಕ್ಕೆ ಶಿಫಾರಸು

ಬೆಂಗಳೂರು, ಫೆ.9(ಕೆಎಂಶಿ)- ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನದ 9ನೇ ಪರಿಚ್ಛೇದಕ್ಕೆ ಅಳವಡಿಸುವಂತೆ ಕೇಂದ್ರಕ್ಕೆ ಶಿಫಾ ರಸು ಮಾಡಲು ಇಂದಿಲ್ಲಿ ಸೇರಿದ್ದ ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕೇಂದ್ರಕ್ಕೆ ಶಿಫಾರಸು ಮಾಡುವ ಮುನ್ನ ನಾಳೆಯಿಂದ ಆರಂಭಗೊಳ್ಳಲಿರುವ ವಿಧಾನ ಮಂಡಲದ ಅಧಿವೇಶನದಲ್ಲಿ ಈ ಸಂಬಂಧ ವಿಸ್ತೃತ ಚರ್ಚೆ ನಡೆಸಿ, ಮೀಸಲಾತಿ ಪ್ರಮಾಣ ಹೆಚ್ಚಳವಾಗಿರುವುದನ್ನು ಸದನದ ಗಮನಕ್ಕೆ ತಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಲು ಸಭೆ ನಿರ್ಧರಿಸಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯ ಸರ್ಕಾರ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪಂಗಡ ಗಳ ಮೀಸಲಾತಿ ಹೆಚ್ಚಿಸಲು ತೀರ್ಮಾನ ಕೈಗೊಂಡಿದೆ. ಇವೆರಡು ವರ್ಗಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣವನ್ನು ಪರಿಶಿಷ್ಟ ಜಾತಿಗೆ ಶೇ.15ರಿಂದ 17, ಪರಿಶಿಷ್ಟ ವರ್ಗಕ್ಕೆ ಶೇ.3ರಿಂದ 7ರಷ್ಟು ಸುಗ್ರೀವಾಜ್ಞೆ ಹೊರಡಿಸಿ ನಂತರ ವಿಧಾನಸಭೆಯಲ್ಲಿ ಈ ತೀರ್ಮಾನಕ್ಕೆ ಕಾಯ್ದೆಯ ಸ್ವರೂಪ ನೀಡಲಾಗಿತ್ತು. ಮೀಸಲಾತಿ ಹೆಚ್ಚಳದ ಲಾಭ ಸಿಗುವಂತಾಗಲು ಇದನ್ನು ಸಂವಿಧಾನದ 9ನೇ ಷೆಡ್ಯೂಲ್ ನಲ್ಲಿ ಸೇರ್ಪಡೆ ಮಾಡಬೇಕು ಎಂಬ ಬೇಡಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಯನ್ನು ಸಂವಿಧಾನದ ಷೆಡ್ಯೂಲ್‍ಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ರಾಜ್ಯದ 30 ಐಟಿಐ ಮೇಲ್ದರ್ಜೆಗೆ: ರಾಜ್ಯದ ಸರ್ಕಾರಿ ಐಟಿಐಗಳನ್ನು ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸಲು 155 ಸರ್ಕಾರಿ ಐಟಿಐಗಳ ಪೈಕಿ 30 ಐಟಿಐಗಳನ್ನು 927 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಸಭೆ ಸಮ್ಮತಿಸಿದೆ. 30 ಸರ್ಕಾರಿ ಐಟಿಐಗಳನ್ನು ಟಾಟಾ ಟೆಕ್ನಾಲಜಿ ಸಂಸ್ಥೆ 927 ಕೋಟಿ ರೂ. ವೆಚ್ಚದಲ್ಲಿ ಉನ್ನತೀ ಕರಿಸುತ್ತಿದ್ದು, ಇದರಲ್ಲಿ 816 ಕೋಟಿ ರೂ.ಗಳನ್ನು ಸಂಸ್ಥೆ ಭರಿಸಲಿದ್ದು ಉಳಿದ 111 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದರು. ಪ್ರತಿ ಐಟಿಐಗಳನ್ನು 27 ಕೋಟಿ ರೂ.ಗಳ ವೆಚ್ಚದಲ್ಲಿ ಉನ್ನತೀ ಕರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೊಡಗಲ್ಲಿ ಪೊಲೀಸ್ ವಸತಿ ಸಂಕೀರ್ಣ: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ಪೆÇಲೀಸ್ ವಸತಿ ಸಂಕೀರ್ಣ ನಿರ್ಮಾಣದ 12 ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.ಚಾ.ನಗರದ 166 ಗ್ರಾಮಗಳಿಗೆ ಕುಡಿಯುವ ನೀರು: ಚಾಮ ರಾಜನಗರ ಜಿಲ್ಲೆಯ 166 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸಲು 26 ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದ್ದು, ಇದರಲ್ಲಿ ಕೇಂದ್ರ ಸರ್ಕಾರ 14.5 ಕೋಟಿ ರೂ. ಹಾಗೂ ರಾಜ್ಯ ಸರ್ಕಾರ 11.5 ಕೋಟಿ ರೂ. ಅನುದಾನ ಭರಿಸಲಿದೆ ಎಂದು ತಿಳಿಸಿದರು.

ಕೆಪಿಎಸ್‍ಸಿ ಸದಸ್ಯತ್ವ ಭರ್ತಿ: ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಒಂದು ಸದಸ್ಯ ಸ್ಥಾನವನ್ನು ಭರ್ತಿ ಮಾಡುವ ಅಧಿಕಾರವನ್ನು ಸಂಪುಟ ಸಭೆ ಮುಖ್ಯಮಂತ್ರಿಗಳಿಗೆ ನೀಡಿದೆ ಎಂದು ಅವರು ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ 15 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸಲು 28 ಕೋಟಿ ರೂ. ಒದಗಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದರು. ಉತ್ತರ ಕನ್ನಡದ ಯಲ್ಲಾಪುರ ಹೋಬಳಿಯಲ್ಲಿ ಬುಡಕಟ್ಟು ಜನರಿಗೆ ವನವಾಸಿ ಶಾಲೆಗಾಗಿ 1 ಎಕರೆ ಜಮೀನನ್ನು ಮಂಜೂರು ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈನಾಪುರ ಸೇರಿದಂತೆ 12 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಒದಗಿಸುವ 32 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಲಾ 16 ಕೋಟಿ ರೂ. ವೆಚ್ಚ ಭರಿಸಲಿವೆ ಎಂದರು.

ಕಲಬುರಗಿಯಲ್ಲಿ ಪಿಪಿ ಮಾದರಿಯಲ್ಲಿ ಬಸ್ ಸ್ಟ್ಯಾಂಡ್ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.
ಹಾವೇರಿ ಜಿಲ್ಲೆಯ ಹಿರೆಕೆರೂರಿನ ಸರ್ವಜ್ಞ ಪ್ರಾಧಿಕಾರದ ವತಿಯಿಂದ ಹಾವೇರಿ, ಹಿರೆಕೆರೂರು, ಮಾಸೂರು, ಅಬಲೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು 25 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು. ಗದಗ್ ಜಿಲ್ಲೆಯಲ್ಲಿ ವೀರರಾಣಿ ಚನ್ನಮ್ಮ ಹೆಸರಿನ ಸಮುದಾಯ ಭವನ ನಿರ್ಮಾಣಕ್ಕೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನರಗುಂದ ಇವರಿಗೆ ಎರಡು ಎಕರೆ ಜಮೀನು ಮಂಜೂರು ಮಾಡುವ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿದೆ ಎಂದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ನಗರ ಸೇರಿದಂತೆ 363 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ 350 ಕೋಟಿ ರೂ. ವೆಚ್ಚದ ಯೋಜನೆಗೂ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯನ್ನು 100 ಹಾಸಿಗೆಯಿಂದ 200 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕೆ 23 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ ಎಂದರು.

ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಉಪಕರಣಗಳನ್ನು ಖರೀದಿಸಲು 24 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಟೋಲ್ ಘಟಕವನ್ನು ಒಡೆದು ಹಾಕಿರುವ ಬಗ್ಗೆ ತನಿಖೆ ನಡೆಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಈ ಬಗ್ಗೆ ಸುಪ್ರೀಂಕೋರ್ಟ್‍ನ ವಿಚಾರಣೆಗಾಗಿ 54.4 ಕೋಟಿ ರೂ. ಠೇವಣಿ ಇಡಲು ಸಂಪುಟ ಒಪ್ಪಿಗೆ ನೀಡಿದೆ ಎಂದರು. ರಾಯಚೂರಿನ ಹಗರಿಬೊಮ್ಮನಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಕೃಷಿ ಕಾಲೇಜು ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು. ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಸೊರಬ ತಾಲೂಕಿ ನಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು 18 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸುವ 49.66 ಕೋಟಿ ರೂ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ. ಈ ಕಟ್ಟಡ ನಿರ್ಮಾಣದಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಕಚೇರಿಗಳೂ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಸರ್ಕಾರಿ ಟೂಲ್ ರೂಂ ಸ್ಥಾಪಿಸುವ 73.75 ಕೋಟಿ ರೂ. ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಹಾಗೆಯೇ ನೆಲಗಾಳದಲ್ಲಿರುವ ಟೂಲ್ ರೂಂನ್ನು 37.55 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ ಎಂದರು.