ಹೊಸ ವರ್ಷಾಚರಣೆಗೆ ನಿರ್ಬಂಧ

ಬೆಂಗಳೂರು, ಡಿ.21 (ಕೆಎಂಶಿ)- ಕೋವಿಡ್ ಪ್ರಕರಣ ಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಕೆಲವು ನಿರ್ಬಂಧಗಳನ್ನು ರಾಜ್ಯ ಸರ್ಕಾರ ಹೇರಿದೆ. ಕೋವಿಡ್ ರೂಪಾಂತರ ತಳಿ ಒಮಿಕ್ರಾನ್ ವೈರಾಣು ರಾಷ್ಟ್ರ ಮತ್ತು ರಾಜ್ಯದಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲು ವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳ ಗಾವಿಯ ಸುವರ್ಣಸೌಧದಲ್ಲಿ ಸಚಿವರು, ಅಧಿಕಾರಿ ಗಳು ಮತ್ತು ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನ ಕೈಗೊಂಡಿದ್ದಾರೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು, ಮನರಂಜನಾ ಕಾರ್ಯಕ್ರಮ ಹಾಗೂ ಬಹಿರಂಗ ಸಂಭ್ರಮಾಚರಣೆಗಳನ್ನು ಹೊಸ ವರ್ಷ ಸಂದರ್ಭದಲ್ಲಿ ನಿಷೇಧಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2ರವರೆಗೂ ರಾಜ್ಯಾದ್ಯಂತ ನಿರ್ಬಂಧ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬಹಿರಂಗ ಸಂಭ್ರಮಾಚರಣೆಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಾರ್ ಮತ್ತು
ರೆಸ್ಟೋರೆಂಟ್, ರೆಸಾಟ್ರ್ಸ್ ಮತ್ತಿತರ ಸ್ಥಳಗಳಲ್ಲಿ ಅಲ್ಲಿನ ಒಟ್ಟು ಸಾಮಥ್ರ್ಯದ ಶೇಕಡ 50ರಷ್ಟು ಮಂದಿಗೆ ಮಾತ್ರ ಪ್ರವೇಶ ನೀಡಬೇಕು. ಆದರೆ ಅಲ್ಲಿ ಯಾವುದೇ ರೀತಿಯ ಮನರಂಜನೆ ಮತ್ತು ಸಂಭ್ರಮಾಚರಣೆ ನಡೆಸುವಂತಿಲ್ಲ. ಅಲ್ಲಿನ ಎಲ್ಲಾ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆಯುವುದು ಕಡ್ಡಾಯ. ಬೆಂಗಳೂರಿನ ಬ್ರಿಗೇಡ್ ಹಾಗೂ ಎಂ.ಜಿ. ರಸ್ತೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ಸಂಭ್ರಮದ ಹೊಸ ವರ್ಷಾಚರಣೆ ಇರುವುದಿಲ್ಲ. ಇದು ಕೇವಲ ಇಲ್ಲಿಗೆ ಮಾತ್ರವಲ್ಲ. ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ.

ಕ್ರಿಸ್‍ಮಸ್ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಚರ್ಚ್‍ಗಳಲ್ಲಿ ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡೇ ಪ್ರಾರ್ಥನೆ ಸಲ್ಲಿಸುವ ವ್ಯವಸ್ಥೆ ಈಗಾಗಲೇ ಇದೆ. ಅದನ್ನೇ ಮುಂದುವರೆಸಬೇಕು. ಕೋವಿಡ್ ಹಾಗೂ ಒಮಿಕ್ರಾನ್ ಬೆಳವಣಿಗೆ ಗಮನಿಸಿ ಪರಿಣಿತರ ಶಿಫಾರಸ್ಸಿನಂತೆ ಹೊಸ ವರ್ಷದ ಸಂದರ್ಭದಲ್ಲಿ ಈ ನಿರ್ಧಾರ ಮಾಡಲಾಗಿದೆ. ಕ್ರಿಸ್‍ಮಸ್‍ನಲ್ಲೂ ಬಹಿರಂಗ ಸಮಾರಂಭಗಳಿಗೆ ಅವಕಾಶವಿಲ್ಲ.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದರೂ, ಹೊಸ ತಳಿ ಒಮಿಕ್ರಾನ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮನರಂಜನೆ ಮತ್ತು ಸಮಾರಂಭಗಳಿಗೆ ಅವಕಾಶ ನೀಡಬಾರದು. ಜನರು ಗುಂಪು ಸೇರದಂತೆ ನೋಡಿಕೊಳ್ಳಬೇಕು ಹಾಗೂ ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತಹ ಬಾರ್, ಕ್ಲಬ್, ಹೊಟೇಲ್ ಮತ್ತಿತರ ಮನರಂಜನಾ ಕೇಂದ್ರಗಳಿಗೆ ಕೆಲವು ನಿಯಮಗಳನ್ನು ಅಳವಡಿಸಿ, ಅವಕಾಶ ಮಾಡಿಕೊಡಬಹುದೆಂದು ತಜ್ಞರು ಸಲಹೆ ನೀಡಿದ್ದರು. ತಜ್ಞರ ಸಲಹೆ ಮೇರೆಗೆ ಇಂದು ಮಧ್ಯಾಹ್ನ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿಯವರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಕೋವಿಡ್-19 ಕಾರಣದಿಂದ ಕಳೆದ ಎರಡು ವರ್ಷಗಳಿಂದ ಹೊಸ ವರ್ಷ ಸಂಭ್ರಮಾಚರಣೆಗೆ ತಡೆ ಬಿದಿದ್ದು, ಈ ವರ್ಷವೂ ಅದು ಮುಂದುವರೆದಿದೆ.