ಉಕ್ರೇನ್‍ನ ಮತ್ತೊಂದು ಅಣು ಸ್ಥಾವರ ವಶಕ್ಕೆ ಮುಂದಾದ ರಷ್ಯಾ

ಕೀವ್, ಮಾ.6- ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾ ಪಡೆಗಳು 11ನೇ ದಿನವಾದ ಭಾನುವಾರ ಉಕ್ರೇನ್ ರಾಜಧಾನಿ ಕೀವ್ ಮತ್ತು ಎರಡನೇ ದೊಡ್ಡ ನಗರ ಖಾರ್ಕಿವ್‍ನ ಜನವಸತಿ ಪ್ರದೇಶಗಳ ಮೇಲೆ ಶೆಲ್ ದಾಳಿ ನಡೆಸಿದ್ದಲ್ಲದೇ, ಉಕ್ರೇನ್‍ನ 3ನೇ ಅಣು ಸ್ಥಾವರವನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.
ಮತ್ತೊಂದೆಡೆ ಬಲಿಷ್ಠ ರಷ್ಯಾ ಪಡೆ ಗಳ ವಿರುದ್ಧ ಉಕ್ರೇನ್ ಸೈನಿಕರು ಮತ್ತು ನಾಗರಿಕರು ವೀರಾವೇಶದಿಂದ ಹೋರಾಡುತ್ತಿದ್ದಾರೆ. ಇಂದು ರಷ್ಯಾದ ಒಂದು ಯುದ್ಧ ವಿಮಾನ, ಒಂದು ಹೆಲಿಕಾಪ್ಟರ್ ಮತ್ತು ಕೆಲ ಟ್ಯಾಂಕರ್‍ಗಳನ್ನು ಉಕ್ರೇನ್ ಸೈನಿಕರು ಸ್ಫೋಟಿಸುವ ಮೂಲಕ ಸೆಡ್ಡು ಹೊಡೆದಿದ್ದಾರೆ. ರಷ್ಯಾ ಪಡೆಗಳು ಈಗಾ ಗಲೇ ಉಕ್ರೇನ್‍ನ ಝೆಪೋರಿಝಿಯಾ ಮತ್ತು ಚರ್ನೋಬಿಲ್ ವಿದ್ಯುತ್ ಅಣು ಸ್ಥಾವರಗಳನ್ನು ವಶಪಡಿಸಿಕೊಂಡಿದೆ.

ಉಕ್ರೇನ್‍ನಲ್ಲಿರುವ ಎಲ್ಲಾ 4 ಅಣು ಸ್ಥಾವರಗಳನ್ನು ವಶಪಡಿಸಿಕೊಂಡು ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಮೂಲಕ ಆ ದೇಶವನ್ನು ಕಾರ್ಗತ್ತಲೆಯಲ್ಲಿ ಮುಳುಗಿಸಿ ಮನಸೋ-ಇಚ್ಛೆ ದಾಳಿ ನಡೆಸುವುದು ರಷ್ಯಾದ ಉದ್ದೇಶವಾಗಿದ್ದು, ಇಂದು ಮತ್ತೊಂದು ಅಣು ಸ್ಥಾವರವನ್ನು ವಶಪಡಿಸಿಕೊಳ್ಳುವತ್ತ ರಷ್ಯಾ ಪಡೆಗಳು ಮುನ್ನುಗ್ಗುತ್ತಿವೆ. ಅಣು ಸ್ಥಾವರದಿಂದ 20 ಕಿ.ಮೀ. ದೂರದಲ್ಲಿರುವ ಯುಝೋಕ್ರೈನ್ಸ್ಕ್‍ನಲ್ಲಿ ಇದೀಗ ರಷ್ಯಾ ಪಡೆಗಳು ಮುನ್ನುಗ್ಗುತ್ತಿವೆ. ಅಣು ಸ್ಥಾವರದತ್ತ ಮುನ್ನುಗ್ಗುತ್ತಿರುವ ಪಡೆಗಳನ್ನು ಉಕ್ರೇನ್ ಸೈನಿಕರು ಮತ್ತು ನಾಗರಿಕರು ತಡೆಯಲು ಮುಂದಾಗಿದ್ದಾರೆ.

ಉಕ್ರೇನ್‍ನ ವಾಯು ನೆಲೆಗಳು, ಸರ್ಕಾರಿ ಕಟ್ಟಡಗಳು, ಗಗನಚುಂಬಿ ಅಪಾರ್ಟ್‍ಮೆಂಟ್ ಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದ ರಷ್ಯಾ ಪಡೆ, ಇಂದು ಜನವಸತಿ ಪ್ರದೇಶದ ಸಣ್ಣಪುಟ್ಟ ಮನೆಗಳ ಮೇಲೂ ಕೂಡ ಶೆಲ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಮನೆಗಳು ಹೊತ್ತಿ ಉರಿಯುತ್ತಿವೆ. ಸಾವಿರಾರು ಮಂದಿ ನಾಗರಿಕರು ಮನೆಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತಮ್ಮ ದೇಶದ 3ನೇ ಅಣು ಸ್ಥಾವರ ವನ್ನು ವಶಪಡಿಸಿಕೊಳ್ಳಲು ರಷ್ಯಾ ಮುಂದಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರು ಅಮೇರಿಕಾದ ಸೆನೆಟರಿಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದಿನ ಯುದ್ಧದಲ್ಲಿ ರಷ್ಯಾ ಪಡೆಗಳು ಕೀವ್ ನಗರದ ಸೂಪರ್ ಮಾರ್ಕೆಟ್‍ವೊಂ ದನ್ನು ಧ್ವಂಸಪಡಿಸಿದ್ದಲ್ಲದೇ, ಖೇರ್ಸಸ್ ನಗರದ ಉಕ್ರೇನ್ ಸೇನಾ ನೆಲೆಯನ್ನು ವಶಪಡಿಸಿ ಕೊಂಡಿದೆ. ಇಪ್ರಿನ್ ನಗರದಲ್ಲಿ ರಷ್ಯಾ ಮತ್ತು ಉಕ್ರೇನ್ ಸೇನೆ ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಉಕ್ರೇನ್‍ನ ಯುವಕರು ಮಾತ್ರವಲ್ಲದೇ ಯುವತಿಯರೂ ಕೂಡ ತಮ್ಮ ದೇಶವನ್ನು ಉಳಿಸಿಕೊಳ್ಳುವ ಸಲುವಾಗಿ ಬಲಿಷ್ಠ ರಷ್ಯಾ ವಿರುದ್ಧ ಬಂದೂಕು ಹಿಡಿದು ಹೋರಾಡುತ್ತಿದ್ದಾರೆ. ರಷ್ಯಾದ ಕೆಲ ಯುದ್ಧ ಟ್ಯಾಂಕ್‍ಗಳನ್ನು ವಶಪಡಿಸಿಕೊಂಡ ನಾಗರಿಕರು, ಅದರ ಮೇಲೆ ಉಕ್ರೇನ್ ಧ್ವಜವನ್ನು ಕಟ್ಟಿ ಕೊಂಡೊಯ್ಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಮತ್ತೊಂದೆಡೆ ಉಕ್ರೇನ್ ಮತ್ತು ರಷ್ಯಾ ತಮ್ಮ ಯುದ್ಧ ಸಾಧನೆಗಳ ಬಗ್ಗೆ ಹೇಳಿಕೊಂ ಡಿವೆ. ಉಕ್ರೇನ್‍ನ 2119 ಸೇನಾ ನೆಲೆ, 74 ಸಶಸ್ತ್ರ ಪಡೆಗಳ ಸಂವಹನ ಕೇಂದ್ರಗಳು, 68 ರಾಡರ್‍ಗಳು, 748 ಯುದ್ಧ ಟ್ಯಾಂಕರ್‍ಗಳು, 90 ಯುದ್ಧ ವಿಮಾನಗಳು, 532 ಸೇನಾ ವಾಹನಗಳನ್ನು ಧ್ವಂಸಗೊಳಿಸಲಾಗಿದೆ ಎಂದು ರಷ್ಯಾ ರಕ್ಷಣಾ ಇಲಾಖೆ ಪ್ರಕಟಿಸಿದೆ.

ಈವರೆಗಿನ ಯುದ್ಧದಲ್ಲಿ 11 ಸಾವಿರ ರಷ್ಯಾ ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಹೇಳಿರುವ ಉಕ್ರೇನ್, 44 ಯುದ್ಧ ವಿಮಾನಗಳು, 44 ಹೆಲಿಕಾಪ್ಟರ್‍ಗಳು, 269 ಯುದ್ಧ ಟ್ಯಾಂಕರ್‍ಗಳು, 945 ಸೇನಾ ವಾಹನಗಳು, 19 ಏರ್‍ಕ್ರಾಫ್ಟ್ ವೆಪನ್‍ಗಳು ಹಾಗೂ 60 ಇಂಧನ ಟ್ಯಾಂಕರ್‍ಗಳನ್ನು ಧ್ವಂಸಗೊಳಿಸಿರುವುದಾಗಿ ಉಕ್ರೇನ್ ಘೋಷಿಸಿದೆ.