ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಣೆ

ಬೆಂಗಳೂರು, ಏ.11(ಕೆಎಂಶಿ)-ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜ ಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕನ್ನಡದಲ್ಲೇ ಪತ್ರ ಬರೆದಿರುವ ಅವರು, ನಾನು ಸ್ವ ಇಚ್ಛೆ ಯಿಂದ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಲು ಬಯಸಿದ್ದೇನೆ.

ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೆಸರನ್ನು ಯಾವುದೇ ಕ್ಷೇತ್ರಕ್ಕೆ ಪರಿಗಣಿಸಬಾರ ದೆಂದು ವಿನಂತಿಸಿದ್ದಾರೆ. ಕಳೆದ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ವಿವಿಧ ಹಂತಗಳಿಂದ ಉಪಮುಖ್ಯಮಂತ್ರಿಯ ವರೆಗೂ ಗೌರವದ ಸ್ಥಾನಮಾನಗಳನ್ನು ಪಕ್ಷ ನೀಡಿದೆ. ಅದಕ್ಕೆ ನಾನು ಋಣಿ ಯಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ಸ್ವಲ್ಪ ದಿನದಲ್ಲೇ ಚುನಾವಣಾ ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದರು. ವಿಧಾನಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನವಿರುವ ಸಂದರ್ಭದಲ್ಲೇ ಈಶ್ವರಪ್ಪ ಇಂತಹ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ಮಾಯಕೊಂಡದ ಎಸ್.ಎ. ರವೀಂದ್ರನಾಥ್, ಬೈಂದೂರಿನ ಹಾಲಾಡಿ ಶ್ರೀನಿವಾಸ ಶೆಟ್ಟಿ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಮುಂದಿನ ಒಂದೆರಡು ದಿನಗಳಲ್ಲಿ ಇಂತಹವರ ಸಂಖ್ಯೆ ಬಿಜೆಪಿಯಲ್ಲಿ ಮತ್ತಷ್ಟು ಹೆಚ್ಚಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ವಿಧಾನಸಭಾ ಚುನಾವಣಾ ಕಣಕ್ಕೆ ಇಳಿಯಲೇ ಬೇಕೆಂದು ಹೋರಾಟ ನಡೆಸಿದ್ದ ಈಶ್ವರಪ್ಪ ಈಗಾಗಲೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿದ್ದರು. ಬೊಮ್ಮಾಯಿ ಸಂಪುಟದಲ್ಲಿ ಮತ್ತೆ ಮಂತ್ರಿಯಾಗಲೇಬೇಕೆಂದು ಅವರ ವಿರುದ್ಧ ಸೆಟೆದು ನಿಂತಿದ್ದಲ್ಲದೆ, ಮಂತ್ರಿ ಮಾಡದಿದ್ದರೆ, ಬೆಳಗಾವಿಯಲ್ಲಿ ನಡೆದ ಚೆಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇಷ್ಟೆಲ್ಲ ರಾಜಕೀಯ ಹುರುಪಿನಿಂದ ಇದ್ದ ಈಶ್ವರಪ್ಪ ಏಕಾಏಕಿ ಇಂತಹ ನಿರ್ಧಾರ ಕೈಗೊಂಡಿರುವುದು ಪಕ್ಷದ ವೇದಿಕೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.