ಟಿ20 ವಿಶ್ವಕಪ್: ದೇಶದ ಜನತೆಗೆ ಟೀಂ ಇಂಡಿಯಾದಿಂದ ದೀಪಾವಳಿ ಡಬಲ್ ಧಮಾಕಾ…

ಮೆಲ್ಬೋರ್ನ್, ಅ.23- ಭಾರೀ ರೋಚಕತೆ ಯಿಂದ ಕೂಡಿದ್ದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ, ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 4 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ.

ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಆಸ್ಟ್ರೇಲಿಯಾ ದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಹಬ್ಬಕ್ಕೂ ಮುನ್ನವೇ ಭಾರತೀ ಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ.

ಪಾಕಿಸ್ತಾನ ನೀಡಿದ 160 ರನ್‍ಗಳ ಸವಾಲಿನ ಗುರಿ ಬೆನ್ನತ್ತಿದ ಭಾರತ ಕೊನೆ ಎಸೆತದಲ್ಲಿ ಗೆಲುವಿನ ನಗೆ ಬೀರಿತು. ಆದರೆ ಚೇಸಿಂಗ್ ಸುಲಭವಾಗಿರಲಿಲ್ಲ. ಇನ್ನು ಕೆಲವೇ ಬಾಲ್ ಗಳಿರುವಂತೆ ಒಂದು ಹಂತದಲ್ಲಿ ಗೆಲುವಿನ ಅವಕಾಶ ಪಾಕಿ ಸ್ತಾನಕ್ಕೆ 79% ಇದ್ದರೆ, ಭಾರತಕ್ಕೆ ಕೇವಲ 21%ರಷ್ಟಿತ್ತು. ಆದರೆ ಕ್ರೀಸ್‍ನಲ್ಲಿ ಕೊಹ್ಲಿ, ಪಾಂಡ್ಯ ಇರುವುದು ಭಾರತೀಯರಲ್ಲಿ ಗೆಲುವಿನ ವಿಶ್ವಾಸ ತಂದಿತ್ತು. ಈ ನಡುವೆ ಇನ್ನೇನು ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲೂ ವಿಕೆಟ್ ಪತನ ಟೀಂ ಇಂಡಿಯಾ ಆತಂಕಕ್ಕೆ ಕಾರಣವಾಗಿತ್ತು. ಆದರೆ ಕೊಹ್ಲಿಯ ದಿಟ್ಟ ಹೋರಾಟ ಭಾರತೀಯರ ದೀಪಾವಳಿ ಸಂಭ್ರಮ ಡಬಲ್ ಮಾಡಿತು.

ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ತಲಾ 4 ರನ್ ಗಳಿಸಿ ಬಹುಬೇಗ ಪೆವಿಲಿಯನ್
ಸೇರಿಕೊಂಡರು. ನಂತರ ಬಂದ ಸೂರ್ಯಕುಮಾರ್ ಯಾದವ್ 2 ಬೌಂಡರಿ ಒಳಗೊಂಡ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬ್ಯಾಟಿಂಗ್‍ನಲ್ಲಿ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆಗುವ ಮೂಲಕ ತಾವೂ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಭಾರತ 31 ರನ್‍ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಕೊಹ್ಲಿ-ಪಾಂಡ್ಯ ಜುಗಲ್ಬಂದಿ: 5ನೇ ವಿಕೆಟ್‍ಗೆ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ವಿಕೆಟ್ ಬೀಳದಂತೆ ಎಚ್ಚರಿಕೆಯ ಆಟವಾಡಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿ ನಿಧಾನವಾಗಿ ರನ್ ಗತಿ ಹೆಚ್ಚಿಸಿದರು. ಇವರಿಬ್ಬರು 78 ಎಸೆತಗಳಲ್ಲಿ 113 ರನ್‍ಗಳ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಮಹಾ ಚೇತರಿಕೆ ನೀಡಿದರು. ಇವರ ದಿಟ್ಟ ಹೋರಾಟ ಭಾರತ, ಪಾಕಿಸ್ತಾನಕ್ಕೆ ಸುಲಭವಾಗಿ ತುತ್ತಾಗುವ ಅಪಾಯದಿಂದ ಪಾರು ಮಾಡಿತು.

ಕೊಹ್ಲಿ ಅಬ್ಬರ: ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಪಾಕ್ ಬೌಲರ್‍ಗಳನ್ನು ತಮ್ಮ ಮನಮೋಹಕ ಹೊಡೆತಗಳ ಮೂಲಕ ಬೆಂಡೆತ್ತಿದರು. ಅದರಲ್ಲೂ ಪಂದ್ಯದ 19 ಓವರ್‍ನ ಕೊನೆಯ 2 ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯವನ್ನು ಭಾರತ ಕಡೆ ತಿರುಗಿಸಿದರು. ಅಂತಿಮವಾಗಿ ಕೊಹ್ಲಿ 53 ಎಸೆತಗಳಲ್ಲಿ 6 ಫೆÇೀರ್ ಮತ್ತು ಅಮೋಘ 4 ಸಿಕ್ಸರ್‍ಗಳೊಂದಿಗೆ ಅಜೇಯ 82 ರನ್ ಸಿಡಿಸಿ ಕೊನೇ ಓವರ್‍ನಲ್ಲಿ ಭಾರತ ತಂಡವನ್ನು ಜಯದ ದಡ ಮುಟ್ಟಿಸಿದರು. ಈ ಮೂಲಕ ಚೇಸ್ ಮಾಸ್ಟರ್ ಎಂಬುದನ್ನು ಕಿಂಗ್ ಕೊಹ್ಲಿ ಮತ್ತೊಮ್ಮೆ ಸಾಬೀತುಪಡಿಸಿದರು.

ಲಾಸ್ಟ್ ಓವರ್ ಥ್ರಿಲ್ಲರ್: ಕೊನೆ ಓವರ್‍ನಲ್ಲಿ ಭಾರತ ತಂಡಕ್ಕೆ ಎಡಗೈ ಸ್ಪಿನ್ನರ್ ಮೊಹ ಮ್ಮದ್ ನವಾಝ್ ಎದುರು 16 ರನ್ ಬೇಕಿತ್ತು. ಮೊದಲ ಎಸೆತದಲ್ಲಿ 40 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದರು. ಎರಡನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಒಂದು ರನ್ ತಂದುಕೊಟ್ಟರು. 3ನೇ ಎಸೆತದಲ್ಲಿ ವಿರಾಟ್ ಕೊಹ್ಲಿ 2 ರನ್ ತಂದುಕೊಟ್ಟರು. ಮರು ಎಸೆತದ ನೋಬಾಲ್‍ಗೆ ಕೊಹ್ಲಿ ಸಿಕ್ಸರ್ ಚಚ್ಚಿದರು. ಹೀಗಾಗಿ ಕೊನೆಯ 3 ಎಸೆತಗಳಲ್ಲಿ 6 ರನ್‍ಗಳ ಅಗತ್ಯವಿತ್ತು. ಮರು ಎಸೆತ ವೈಡ್ ಆಯಿತು. ನಂತರ 4ನೇ ಎಸೆತದಲ್ಲಿ ಬೈ ಮೂಲಕ 3 ರನ್ ಗಳಿಸಿದರು. ಇನ್ನು ಕೊನೆಯ 2 ಎಸೆತಗಳಲ್ಲಿ 2 ರನ್‍ಗಳ ಅಗತ್ಯವಿತ್ತು. ಆದರೆ 5ನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ರನೌಟ್ ಆದರು. ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು 2 ರನ್‍ಗಳ ಅಗತ್ಯವಿತ್ತು. ಮತ್ತೆ ನವಾಜ್ ವೈಡ್ ಎಸೆದರು. ಹೀಗಾಗಿ ಕೊನೆಯ ಎಸೆತದಲ್ಲಿ ಒಂದು ರನ್ ಅಗತ್ಯವಿತ್ತು. ಅಶ್ವಿನ್ ನೇರವಾಗಿ ಬೌಂಡರಿ ಸಿಡಿಸುವ ಮೂಲಕ ಗೆಲುವಿನ ರನ್ ಬಾರಿಸಿದರು. ಅಂತಿಮವಾಗಿ ಭಾರತ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಪಾಕಿಸ್ತಾನದ ಪರ ಹ್ಯಾರಿಸ್ ರೌಫ್, ಮೊಹಮ್ಮದ್ ನವಾಜ್ 2, ನಸೀಮ್ ಶಾ 1 ವಿಕೆಟ್ ಉರುಳಿಸಿದರು.

ಸೇಡು ತೀರಿಸಿಕೊಂಡ ಭಾರತ: ಈ ಗೆಲುವಿನೊಂದಿಗೆ ಭಾರತ 2021ರ ಟಿ20 ವಿಶ್ವಕಪ್‍ನಲ್ಲಿ ಆದ ಸೋಲು ಹಾಗೂ ಇತ್ತೀಚೆಗೆ ನಡೆದ ಏಷ್ಯಾಕಪ್ ಸೋಲಿನ ಸೇಡು ತೀರಿಸಿಕೊಂಡಿತು. ಇದಕ್ಕೂ ಮುನ್ನಾ ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಪಾಕಿಸ್ತಾನದ ಪರ ಶಾನ್ ಮಸೂದ್ 52, ಇಫ್ತಿಕರ್ ಅಹಮದ್ 51, ಶಾಹೀನ್ ಆಫ್ರಿದಿ 16ರನ್ ಗಳಿಸಿದ್ದು ಬಿಟ್ಟರೆ ಉಳಿದವರು ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗದೇ ಪೆವಿಲಿಯನ್ ಪರೇಡ್ ನಡೆಸಿದರು. ಭಾರತದ ಪರ ಹರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ತಲಾ 3, ಭುವನೇಶ್ವÀರ್ ಕುಮಾರ್, ಮೊಹಮ್ಮದ್ ಶಮಿ ತಲಾ ಒಂದೊಂದು ವಿಕೆಟ್ ಪಡೆದರು.

ಟೀಂ ಇಂಡಿಯಾ ದಾಖಲೆ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ 3 ಓವರ್‍ಗಳಲ್ಲಿ ಗರಿಷ್ಠ ರನ್ ಸಿಡಿಸಿ ಪಂದ್ಯ ಗೆದ್ದ ದಾಖಲೆಗಳಲ್ಲಿ ಭಾರತ ಇದೀಗ ಆಸ್ಟ್ರೇಲಿಯಾ ಜೊತೆ ಮೊದಲ ಸ್ಥಾನ ಹಂಚಿಕೊಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಅಂತಿಮ 3 ಓವರ್‍ಗಳಲ್ಲಿ 48 ರನ್ ಸಿಡಿಸಿದೆ. ಈ ಮೂಲಕ 4 ವಿಕೆಟ್ ರೋಚಕ ಗೆಲುವು ದಾಖಲಿಸಿದೆ. ಇನ್ನು 2010ರಲ್ಲಿ ಆಸ್ಟ್ರೇಲಿಯಾ ಕೂಡ ಪಾಕಿಸ್ತಾನ ವಿರುದ್ಧ 48 ರನ್ ಸಿಡಿಸಿ ಗೆಲುವು ದಾಖಲಿಸಿತ್ತು.