ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ

ಬೆಂಗಳೂರು,ನ.29(ಕೆಎಂಶಿ)-ಒಮಿಕ್ರಾನ್ ಕುರಿತು ಜನತೆ ಭಯಪಡದೆ, ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಂದೆ ಲಾಕ್‍ಡೌನ್ ಪ್ರಸ್ತಾವನೆ ಇಲ್ಲ, ಶಾಲಾ-ಕಾಲೇಜುಗಳ ಮೇಲೆ ನಿಗಾ ಇಡಲು ಸೂಚಿಸಲಾಗಿದ್ದು, ಅವುಗಳನ್ನು ಮುಚ್ಚಲು ಸೂಚಿಸಿಲ್ಲ ಎಂದು ತಿಳಿಸಿದರು.

ರೂಪಾಂತರಿ ವೈರಸ್ ಕಂಡು ಬಂದಿರುವ ದೇಶಗಳಿಂದ ಬಂದಿ ರುವವರ ಮೇಲೆ ನಿಗಾ ಇರಿಸಿದ್ದು, ಅವರ ಸಂಪರ್ಕಿತರ ಪತ್ತೆ ಹಚ್ಚಿ ಪರೀ ಕ್ಷಿಸಲಾಗುತ್ತಿದೆ. ಇದಲ್ಲದೆ ವಿಮಾನ ನಿಲ್ದಾಣದಲ್ಲಿಯೂ ಕಟ್ಟು ನಿಟ್ಟಿನ ಪರೀಕ್ಷೆ ಮಾಡುತ್ತಿದ್ದು, ನೆಗೆಟಿವ್ ಇದ್ದರೆ ಮಾತ್ರ ನಗರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಎಲ್ಲಾ ಜಿಲ್ಲೆಗಳಲ್ಲಿ ಕೇರಳದಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಕಡ್ಡಾಯ ಹಾಗೂ 7ನೇ ದಿನಕ್ಕೆ ಮತ್ತೊಮ್ಮೆ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಜನರು ಹೆಚ್ಚಾಗಿ ಗುಂಪು ಸೇರುವುದನ್ನು ತಡೆ ಯಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ, ಸರ್ಕಾರ ನಿರಂ ತರವಾಗಿ ತಜ್ಞರು ಮತ್ತು ಕೇಂದ್ರ ಸರ್ಕಾರ ದೊಂದಿಗೆ ಸಂಪರ್ಕದಲ್ಲಿದೆ, ಕಾಲಕಾಲಕ್ಕೆ ಅವರು ನೀಡುವ ನಿರ್ದೇಶನದಂತೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಆಫ್ರಿಕಾದಿಂದ ಆಗಮಿಸಿರುವ ವ್ಯಕ್ತಿಗೆ ವಿಭಿನ್ನ ರೋಗ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗಾಗಿ ಐ.ಸಿ.ಎಂ.ಆರ್‍ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಯಾವ ತಳಿ ಎಂದು ತಿಳಿಯಲಿದೆ ಎಂದರು. ರಾಜ್ಯದ ಗಡಿಭಾಗ ಕೇರಳದಿಂದ ರಾಜ್ಯಕ್ಕೆ ಪ್ರವೇಶಿ ಸುವವರ ಮೇಲೆಯೂ ದೊಡ್ಡ ಪ್ರಮಾಣದಲ್ಲಿ ನಿಗಾ ಇರಿಸ ಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೇರಳದ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಇವರುಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ ಎಂದರು. ಹೊಸ ತಳಿಯ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳಂತೆ ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಶಾಲಾ ಕಾಲೇಜುಗಳ ಮೇಲೆಯೂ ನಿಗಾ ವಹಿಸಿದ್ದು, ಎಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಅಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸ ಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು