ಇಂದು ಸಿಇಓಗಳು, ನಾಳೆ ಡಿಸಿಗಳೊಂದಿಗೆ ಸಿಎಂ ಸಂವಾದ

ಬೆಂಗಳೂರು, ಡಿ. 29(ಕೆಎಂಶಿ)- ಸರ್ಕಾರದ ಯೋಜನೆ ಗಳು ಜಿಲ್ಲಾ ಮಟ್ಟದಲ್ಲಿ ಯಾವ ರೀತಿ ಅನುಷ್ಠಾನಕ್ಕೆ ಬಂದಿವೆ. ಮತ್ತು ಕೋವಿಡ್‍ನ ಸ್ಥಿತಿಗತಿಗಳನ್ನು ತಿಳಿದು ಕೊಳ್ಳಲು ಸಿಎಂ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆ ನಾಳೆ (ಡಿ.30)ಯಿಂದ ಸಂವಾದ ನಡೆಸಲಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಈ ಸಂವಾದ ನಡೆಯಲಿದ್ದು, ಮೊದಲ ದಿನ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ, ಮರುದಿನ ಜಿಲ್ಲಾಧಿಕಾರಿಗಳ ಜೊತೆ ಜಿಲ್ಲೆಯಲ್ಲಿ ಆಗಿರುವ ಅಭಿ ವೃದ್ಧಿಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಮನೆಬಾಗಿಲಿಗೆ ಸರ್ಕಾರದ ಸವಲತ್ತು ತಲುಪಿಸುವ ವಿನೂತನ ಕಾರ್ಯ ಕ್ರಮ ಜಾರಿಗೆ ಜನವರಿ 26ರಂದು ಚಾಲನೆ ನೀಡಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿ ಸಿದಂತೆ ಕೆಲವು ಸಲಹೆ ಸೂಚನೆ ಗಳನ್ನು ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ. ಇದುವರೆಗೂ ಜಿಲ್ಲಾಧಿಕಾರಿಗಳು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಗಳು ನಡೆದ ಸಂದರ್ಭ ದಲ್ಲಿ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ತಮ್ಮ ತಮ್ಮ ಇಲಾಖೆಯಲ್ಲಾಗಿರುವ ಪ್ರಗತಿ ಮತ್ತು ಮುಂದೆ ಏನು ಮಾಡುತ್ತೇವೆ ಎಂಬುದನ್ನು ಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರ ಗಮನಕ್ಕೆ ತರುತ್ತಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿ ನೀಡುತ್ತಿದ್ದರು ಅಷ್ಟೇ. ಆದರೆ ನಾಳೆಯಿಂದ ನಡೆಯುತ್ತಿರುವ ಎರಡು ದಿನಗಳ ಸಭೆಯ ಸ್ವರೂಪವೇ ಬೇರೆಯಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಆಡ ಳಿತದ ವ್ಯಾಪ್ತಿಯಲ್ಲಿ ಪ್ರಮುಖವಾಗಿ ಕೈಗೆತ್ತಿಕೊಂಡಿರುವ ಐದು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದೆ ತೆಗೆದುಕೊಳ್ಳುವ ಐದು ಯೋಜನೆಗಳ ಬಗ್ಗೆ ಸವಿಸ್ತಾರ ವಾದ ಚಿತ್ರಣವನ್ನು ಮುಖ್ಯಮಂತ್ರಿಯವರ ಮುಂದಿಡ ಬೇಕು. ಇದಕ್ಕಾಗಿಯೇ ಜಿಲ್ಲಾಧಿಕಾರಿಗಳಿಗೆ ಇಂತಿಷ್ಟು ಸಮಯವೆಂದು ಮುಖ್ಯ ಕಾರ್ಯದರ್ಶಿಯವರು ಸಮಯ ನಿಗದಿಪಡಿಸಿದ್ದಾರೆ. ಮುಖ್ಯಮಂತ್ರಿಯವರ ಈ ನಿರ್ಧಾ ರದಿಂದ ಜಿಲ್ಲಾಧಿಕಾರಿಗಳು ಸಭೆಗೆ ಬಂದು ಹೋಗು ವಂತಾಗದು. ತಾವು ಕೈಗೊಂಡ ಕಾರ್ಯಕ್ರಮದ ಹಾಗೂ ಮುಂದೆ ಕೈಗೊಳ್ಳುವ ಯೋಜನೆಗಳನ್ನು ಮುಖ್ಯಮಂತ್ರಿ ಯವರಿಗೆ ನೇರವಾಗಿ ತಿಳಿಸಬೇಕಾಗಿದೆ. ಇದೇ ಸಭೆಯಲ್ಲಿ ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡುವುದಲ್ಲದೆ, ಕೋವಿಡ್-19 ಸ್ಥಿತಿಗತಿಗಳ ಬಗ್ಗೆ ಜಿಲ್ಲಾಡಳಿತ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆಯು ವಿವರಣೆ ನೀಡಲಿದ್ದಾರೆ. ಸಭೆಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿಯವರು 2022-23 ರ ಮುಂಗಡ ಪತ್ರ ಸಂಬಂಧ ಹಾಗೂ ಜಿಲ್ಲೆಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆಯಲು ಎರಡು ದಿನಗಳ ಸಭೆ ನಡೆಸುತ್ತಿದ್ದೇನೆ ಎಂದರು.

ನಂತರ ರಾಜಕೀಯದ ಬಗ್ಗೆ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಮೊದಲಿನಿಂದಲೂ ವರಿಷ್ಠರಿಗೆ ಸ್ಪಷ್ಟತೆ ಇದೆ.ಮತ್ತು ಈ ಸ್ಪಷ್ಟತೆಯನ್ನು ಹಿರಿಯ ನಾಯಕರಾದ ಅರುಣ್ ಸಿಂಗ್ ಅವರು ಎತ್ತಿ ತೋರಿಸಿದ್ದಾರೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು. ಪಕ್ಷದ ವರಿಷ್ಠರು ನಮ್ಮ ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮುಂದಿನ ಚುನಾವಣೆಗಾಗಿ ಪಕ್ಷ ಮತ್ತು ಸರ್ಕಾರವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.ಅವರ ಈ ವಿಶ್ವಾಸಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.ಹಾಗೆಯೇ ಅವರ ನಿರೀಕ್ಷೆಯನ್ನು ಈಡೇರಿಸಲು ಶ್ರಮವಹಿಸಿ ದುಡಿಯುತ್ತೇವೆ ಎಂದು ಹೇಳಿದರು.

ಪಕ್ಷ ಹಾಗೂ ಸರ್ಕಾರವನ್ನು ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗುವ ಎಲ್ಲ ಪ್ರಯತ್ನವನ್ನು ಮಾಡುತ್ತೇವೆ.ಈ ವಿಷಯದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವರಿಷ್ಠರಿಂದ ಯಾವ ಸೂಚನೆಯೂ ಬಂದಿಲ್ಲ ಎಂದ ಅವರು, ವರಿಷ್ಠರನ್ನು ಭೇಟಿ ಮಾಡಲು ಸದ್ಯಕ್ಕೆ ದೆಹಲಿಗೆ ಹೋಗು ವುದಿಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸ್ಪಷ್ಟಪಡಿಸಿದರು. ಬೆಳಗಾವಿಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ಅವರು,ಯಾರು ಎಲ್ಲಿಗೆ ಬೇಕಾದರೂ ಹೋಗುವ ಸ್ವಾತಂತ್ರ್ಯವಿದೆ ಎಂದರು. ಒಮಿಕ್ರಾನ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನೈಟ್ ಕಫ್ರ್ಯೂ ವಿಧಿಸಿದ ಸರ್ಕಾರದ ಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ ಎಂಬ ಮಾತುಗಳ ಬಗ್ಗೆ ಉತ್ತರಿಸಿದ ಅವರು, ಗುರುವಾರ ಬೆಂಗಳೂರಿಗೆ ಹೋದ ನಂತರ ಈ ಕುರಿತು ಪರಿಶೀಲನೆ ನಡೆಸಲಾಗುವುದು ಎಂದರು. ಮಂಡಿನೋವಿಗಾಗಿ ತಮಗೆ ಚಿಕಿತ್ಸೆ ನೀಡಿದ ಲೋಕೇಶ್ ಎಂಬುವವರ ಮೇಲೆ ಧಾಳಿಯಾಗಿತ್ತು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅವರು, ಲೋಕೇಶ್ ಅವರ ಬಗ್ಗೆ ನನಗೆ ಗೊತ್ತಿಲ್ಲ.ನನಗೆ ಆ ಬಗ್ಗೆ ಸ್ನೇಹಿತರ್ಯಾರೋ ಹೇಳಿದ್ದರು. ಆದರೆ ನಾನು ಒಪ್ಪಿರಲಿಲ್ಲ.ಈಗಲೂ ಅದು ದೊಡ್ಡ ವಿಷಯವಲ್ಲ ಎಂದು ನುಡಿದರು.