ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ

ಡೆಹ್ರಾಡೂನ್,ಮಾ.9-ಉತ್ತರಾಖಂಡ್‍ನ ಆಡಳಿತರೂಢ ಪಕ್ಷ ಬಿಜೆಪಿ ನಾಯಕತ್ವ ದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವುದಕ್ಕಾಗಿ ಹಾಲಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ.

ಮಾ.7ರಂದು ಗೈರ್ಸೇನ್‍ನಲ್ಲಿ ಬಜೆಟ್ ಅಧಿವೇಶನದ ಸಮಯದಲ್ಲಿ ಬಿಜೆಪಿ ದಿಢೀರ್ ಕೋರ್ ಕಮಿಟಿ ಸಭೆ ನಡೆಸಿದ್ದು ಸರ್ಕಾರದಲ್ಲಿ ಮಹತ್ವದ ಬದಲಾವಣೆಯ ಸುಳಿವು ನೀಡಿತ್ತು. ಈ ಬೆನ್ನಲ್ಲೇ ತ್ರಿವೇಂದ್ರ ಸಿಂಗ್ ರಾವತ್ ಮಾ.9 ರಂದು ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಾಖಂಡ್‍ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಾವಧಿ ಪೂರ್ಣ ಗೊಳಿಸುವುದಕ್ಕೆ ಇನ್ನೂ 1 ವರ್ಷ ಬಾಕಿ ಇರುವಾಗ ನಾಯಕತ್ವದ ಬದಲಾವಣೆಯಾಗಿ ರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಶಾಸಕರು ತ್ರಿವೇಂದ್ರ ಸಿಂಗ್ ರಾವತ್ ಅವರ ಆಡಳಿತ ಶೈಲಿಯ ಬಗ್ಗೆ ಹೈಕಮಾಂಡ್‍ಗೆ ದೂರು ನೀಡಿದ್ದರು ಈ ಸಂಬಂಧ ಮಾ.8ರಂದು ದೆಹಲಿಗೆ ಭೇಟಿ ನೀಡಿದ್ದ ರಾವತ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದರು. 2017ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೇರಿದ್ದ ಬಿಜೆಪಿ 69 ಸಂಖ್ಯಾಬಲ ಇರುವ ವಿಧಾನಸಭೆಯಲ್ಲಿ 57 ಸ್ಥಾನಗಳನ್ನು ಗೆದ್ದಿತ್ತು.