ಅಪ್ರಾಪ್ತ ವಾಹನ ಚಾಲಕರ ವಿರುದ್ಧ ಮೈಸೂರಲ್ಲಿ 81 ಪ್ರಕರಣ ದಾಖಲು

ಆತಂಕ ಮೂಡಿಸಿರುವ ಪೋಷಕರ ಬೇಜವಾಬ್ದಾರಿ ವರ್ತನೆ
ಮೈಸೂರು, ಮಾ.1(ಆರ್‍ಕೆ)- ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತಿ ರುವ ಮೈಸೂರು ಪೊಲೀಸರು, ಅಪ್ರಾಪ್ತ ವಾಹನ ಚಾಲಕರ ವಿರುದ್ಧ ಕಳೆದ 20 ದಿನಗಳಲ್ಲಿ ಒಟ್ಟು 81 ಪ್ರಕರಣ ದಾಖಲಿಸಿದ್ದಾರೆ.

18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಸಾರಿಗೆ ಇಲಾಖೆಯು ವಾಹನ ಚಾಲನಾ ಪರವಾನಗಿ(ಆಡಿiviಟಿg ಟiಛಿeಟಿಛಿe) ನೀಡುತ್ತಿದೆಯಾದರೂ, ಅಪ್ರಾಪ್ತರೂ ದ್ವಿಚಕ್ರವಾಹನ, ಕಾರುಗಳನ್ನು ಚಾಲನೆ ಮಾಡಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.

ಅಪ್ರಾಪ್ತ ವಿದ್ಯಾರ್ಥಿಗಳು ತರುವ ವಾಹನಗಳನ್ನು ನಿಲ್ಲಿಸಲು ಅವಕಾಶ ನೀಡ ಬಾರದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ, ಅಪ್ರಾಪ್ತರು ಚಾಲನೆ ಮಾಡಿಕೊಂಡು ಬರುವ ವಾಹನಗಳಿಗೆ ಇಂಧನ ತುಂಬಿಕೊಡಬಾರದು ಹಾಗೂ ಅಂತಹವರ ಮಾಹಿತಿ ನೀಡಬೇಕೆಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಎಲ್ಲಾ ಪೆಟ್ರೋಲ್ ಬಂಕ್ ಮಾಲೀಕರಿಗೆ ಸೂಚನೆ ನೀಡಿದ್ದರು.

ಆ ರೀತಿ ಪೆಟ್ರೋಲ್ ಬಂಕ್‍ನಿಂದ ಬಂದ ಮಾಹಿತಿ ಹಾಗೂ ರಸ್ತೆಯಲ್ಲಿ ತಪಾಸಣೆ ವೇಳೆ ಪೊಲೀಸರು ಅಪ್ರಾಪ್ತರು ಚಾಲನೆ ಮಾಡಿದ ಒಟ್ಟು 81 ವಾಹನಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲ್‍ಗಳು, ಶಾಲೆಗಳು, ಚಾಟ್ಸ್‍ಗಳು, ಬಸ್ ಸ್ಟ್ಯಾಂಡ್, ರೈಲು ನಿಲ್ದಾಣದ ಬಳಿ ಡ್ರಾಪ್ ನೀಡಲು ಬರುವ ಅಪ್ರಾಪ್ತರನ್ನು ಹಿಡಿದು, ಅವರ ಪೋಷಕರು ಅಥವಾ ಆರ್‍ಸಿ ಓನರ್‍ಗಳನ್ನು ಕರೆಸಿ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ತಿಳುವಳಿಕೆ ಹೇಳಿ ಕಳುಹಿಸಲಾಗುತ್ತಿದೆ.

ದಂಡ ವಸೂಲಿ ಮಾಡುವುದು ನಮ್ಮ ಉದ್ದೇಶವಲ್ಲ, ಚಾಲನೆ ಬರದ ಅಪ್ರಾಪ್ತರು ವಾಹನ ಓಡಿಸಿ ಅಪಘಾತ ಸಂಭವಿಸಿದಲ್ಲಿ ಅಮಾಯಕರು ಪ್ರಾಣ ಕಳೆದು ಕೊಳ್ಳುವುದನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನಾವು ಕಾರ್ಯಾ ಚರಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಮೈಸೂರು ನಗರದಾದ್ಯಂತ ದಟ್ಟ ಸಂಚಾರವಿರುವ ಪ್ರಮುಖ ರಸ್ತೆಗಳು, ರಿಂಗ್ ರಸ್ತೆಗಳಲ್ಲಿ 12ರಿಂದ 18 ವರ್ಷದೊಳಗಿನವರು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಓಡಿಸುತ್ತಿರುವುದು ಕಂಡು ಬರುತ್ತಿರುವುದರಿಂದ ಎಲ್ಲಾ ಠಾಣೆಗಳ (ಸಿವಿಲ್ ಮತ್ತು ಟ್ರಾಫಿಕ್) ಪೊಲೀಸರಿಗೆ ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದರು.

ಪೋಷಕರು ಈ ಬಗ್ಗೆ ಎಚ್ಚರಿಕೆಯಿಂದಿರಬೇಕು, 18 ವರ್ಷದೊಳಗಿನ ಮಕ್ಕಳಿಗೆ ವಾಹನ ನೀಡಬಾರದು. ಸಿಕ್ಕಿಬಿದ್ದಲ್ಲಿ ವಾಹನ ಮಾಲೀಕರು(ಖಅ ಔWಓಇಖ)ಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದ ಅವರು, 2019ರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಪ್ರಕಾರ ಪೋಷಕರಿಗೆ 25,000 ರೂ. ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದರು.