ಮೈಸೂರು ಸಿಲ್ಕ್ ಸೀರೆಗೆ ಅಧಿಕ ಬೇಡಿಕೆ: ನೂತನ ನೇಯ್ಗೆ ಘಟಕ ಸ್ಥಾಪನೆಗೆ ನಿರ್ಧಾರ

ಮೈಸೂರು: ಮೈಸೂರು ಸಿಲ್ಕ್ ಸೀರೆಗೆ ಹೆಚ್ಚಿನ ಬೇಡಿಕೆ ಇದ್ದು, ನೂತನ ನೇಯ್ಗೆ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತಕ್ಕೆ ಇಂದು ಭೇಟಿ ನೀಡಿ, ರೇಷ್ಮೆ ನೇಯ್ಗೆ ಘಟಕವನ್ನು ಪರಿಶೀಲಿಸಿದ ಬಳಿಕ ನಿಗಮದ ಶತಮಾನೋತ್ಸವ ಭವನದಲ್ಲಿ ಬುಧವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ರೇಷ್ಮೆಗೆ ದೇಶ ಹಾಗೂ ವಿದೇಶದಲ್ಲಿ ಭಾರೀ ಬೇಡಿಕೆ ಇದೆ. ಮೈಸೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ರೇಷ್ಮೆ ಉತ್ಪನ್ನಗಳು ಗುಣಮಟ್ಟದಿಂದಾಗಿ ಹೆಚ್ಚು ಪ್ರಸಿದ್ದಿಯಾಗಿವೆ. ಪ್ರಸ್ತುತ ವಾರ್ಷಿಕ 80ರಿಂದ 85 ಸಾವಿರ ರೇಷ್ಮೆ ಸೀರೆ ತಯಾರಿಸಲಾಗುತ್ತಿದೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ 25 ಕೋಟಿ ರೂ. ವೆಚ್ಚದಲ್ಲಿ ಹೆಚ್ಚುವರಿಯಾಗಿ 30ರಿಂದ 35 ಸಾವಿರ ಸೀರೆಗಳ ಉತ್ಪಾದನೆ ಮಾಡುವುದಕ್ಕೆ ಹೊಸ ಘಟಕವೊಂದನ್ನು ಸ್ಥಾಪಿಸುವುದಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಶೀಘ್ರವೇ ಕಟ್ಟಡ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದರು.

ನಗರದ ರೇಷ್ಮೆ ನೇಯ್ಗೆ ಕಾರ್ಖಾನೆ 159 ವಿದ್ಯುತ್ ಚಾಲಿತ ಮಗ್ಗಗಳ ಸ್ಥಾಪನಾ ಸಾಮಥ್ರ್ಯ ಹೊಂದಿದ್ದು, ಒಂದೇ ಪಾಳಿಯಲ್ಲಿ 35ಸಾವಿರ ಮೀಟರ್‍ಗಳಷ್ಟು ರೇಷ್ಮೆ ಬಟ್ಟೆಯನ್ನು ಉತ್ಪಾದಿಸುವ ಸಾಮಥ್ರ್ಯವನ್ನು ಹೊಂದಿದೆ. ರೇಷ್ಮೆ ಉತ್ಪನ್ನಗಳಾದ ಚಿನ್ನದ ಜರಿ ಅಳವಡಿಸಿರುವ ಕ್ರೇಪ್ ಮತ್ತು ಜಾರ್ಜೆಟ್ ಸೀರೆ, ಧೋತಿ, ಶಲ್ಯ, ಸ್ಕಾರ್ಫ್, ಟೈ, ಷರ್ಟ್ ಸೇರಿದಂತೆ ಇನ್ನಿತರ ವಸ್ತ್ರಗಳನ್ನು ಉತ್ಪಾದಿಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ನಿಗಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದರು.

ಮೃದು ರೇಷ್ಮೆ ನೇಯ್ಗೆ ಘಟಕ: ಚನ್ನಪಟ್ಟಣದಲ್ಲಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ರೇಷ್ಮೆ ಸೀರೆಗಳನ್ನು ಒದಗಿಸುವ ಉದ್ದೇಶದಿಂದ ಮುಚ್ಚಲಾಗಿರುವ ಜೂಟು ರೇಷ್ಮೆ ಗಿರಣಿ ಘಟಕವನ್ನು ಆರಂಭಿಸಲು ಸರಕಾರದ ಅನುಮೋದನೆ ಸಿಕ್ಕಿದೆ. ಈಗಾಗಲೇ 30 ವಿದ್ಯುತ್‍ಚಾಲಿತ ಮಗ್ಗಗಳನ್ನು ಸ್ಥಾಪಿಸಲಾಗಿದೆ. ಈ ಯೋಜನೆಯ ವೆಚ್ಚ 8.77 ಕೋಟಿಯಾಗಿದ್ದು, ಸರಕಾರದಿಂದ 5.37 ಕೋಟಿ ಅನುದಾನ ದೊರೆತಿದೆ ಎಂದು ತಿಳಿಸಿದರು.

ವಿವಿಧೆಡೆ ಮಳಿಗೆಗಳ ಸ್ಥಾಪನೆ: ನಿಗಮದ ಉತ್ಪನ್ನಗಳನ್ನು 18 ಮಾರಾಟ ಮಳಿಗೆಗಳ ಮೂಲಕ ಮಾಡಲಾಗುತ್ತಿದೆ. ಇವುಗಳಲ್ಲಿ ಮೈಸೂರಿನಲ್ಲಿ 6, ಬೆಂಗಳೂರಿನಲ್ಲಿ 8, ಚನ್ನಪಟ್ಟಣ, ಚೆನ್ನೈ, ದಾವಣಗೆರೆ, ಹೈದ್ರಾಬಾದ್‍ನಲ್ಲಿ ತಲಾ ಒಂದೊಂದು ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ದೆಹಲಿ ಮತ್ತು ಮುಂಬೈ ನಗರದಲ್ಲಿ ಹೊಸದಾಗಿ ಮಾರಾಟ ಮಳಿಗೆಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ಅಂತಾರಾಷ್ಟ್ರೀಯ ಗ್ರಾಹಕರಿಗೆ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ ವೆಬ್‍ಸೈಟ್ ಸೌಕರ್ಯ ಸಹ ಒದಗಿಸಲಾಗಿದೆ ಎಂದರು.

ಮೈಸೂರು ಸಿಲ್ಕ್ ಹೆಸರಿನಲ್ಲಿ ಶೋರೂಂ ಪ್ರಾರಂಭಿಸಿ ನಮ್ಮ ಬ್ರಾಂಡ್ ಬಳಸಿಕೊಂಡು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಲು ವಿಚಕ್ಷಣದಳ ರಚನೆ ಮಾಡಲಾಗುವುದು. ಕೆಎಸ್‍ಐಸಿ ಮಳಿಗೆಗಳ ಮಳಿಗೆಗಳನ್ನು ಮತ್ತಷ್ಟು ಆಕರ್ಷಣೀಯವಾಗಿ ಮಾಡಲಾಗುವುದು. ನಮ್ಮ ಬ್ರಾಂಡ್ ದುರ್ಬಳಕೆಯಾಗದಂತೆ ನೋಡಿಕೊಳ್ಳಲಾಗುವುದು. ನಿಗಮದ ಅಧಿಕಾರಿಗಳ, ಸಿಬ್ಬಂದಿ ಶ್ರಮದ ಫಲವಾಗಿ ಆದಾಯ ಬರುತ್ತಿದೆ. ಇದರ ಆದಾಯ ಹೆಚ್ಚಳಕ್ಕೆ ಬೇಕಾದ ಎಲ್ಲ ಪ್ರೋತ್ಸಾಹ ಕೊಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕಿ ನೀಲಾ ಮಂಜುನಾಥ್, ಪ್ರಧಾನ ವ್ಯವಸ್ಥಾಪಕರಾದ ಡಿ.ಕೃಷ್ಣಪ್ಪ, ಎಲ್.ಹೆಚ್.ಭೀಮಪ್ಪ, ಮಾಜಿ ಮೇಯರ್‍ಗಳಾದ ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಮುಖಂಡ ರಾಜಣ್ಣ, ರಾಮು ಸೇರಿದಂತೆ ಇನ್ನಿತರರು ಇದ್ದರು.

ಪ್ರವಾಸಿ ಭೂಪಟದಲ್ಲಿ ಸುತ್ತೂರು ಮಠ, ರೇಷ್ಮೆ ಕಾರ್ಖಾನೆ

ಮೈಸೂರಿಗೆ ಬರುವ ಪ್ರವಾಸಿಗರು ಇನ್ನು ಮುಂದೆ ಮೈಸೂರಿನ ರೇಷ್ಮೆ ನೇಯ್ಗೆ ಘಟಕ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡುವುದಕ್ಕಾಗಿ ಜಿಲ್ಲೆಯ ಪ್ರವಾಸಿ ಭೂಪಟದಲ್ಲಿ ಈ ಎರಡು ಸ್ಥಳವನ್ನು ಹೊಸದಾಗಿ ಸೇರಿಸಲಾಗುವುದು. ಇದರಿಂದ ಮೈಸೂರು ರೇಷ್ಮೆಯನ್ನು ಕಾರ್ಖಾನೆಯಿಂದಲೇ ಖರೀದಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ ರೇಷ್ಮೆ ಉತ್ಪಾದನೆಯ ಬಗ್ಗೆಯೂ ಮಾಹಿತಿ ಪಡೆದಂತಾಗುತ್ತದೆ. ಸುತ್ತೂರು ಕ್ಷೇತ್ರಕ್ಕೆ ಪ್ರವಾಸಿಗರು ಭೇಟಿ ನೀಡುವುದರಿಂದ ಅಲ್ಲಿನ ಶಿಕ್ಷಣ, ಆರೋಗ್ಯ ಹಾಗೂ ಅನ್ನದಾಸೋಹದ ಬಗ್ಗೆ ಮಾಹಿತಿ ಪಡೆದಂತಾಗುತ್ತದೆ. ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಈ ಬಾರಿ ಅದ್ಧೂರಿ ಜಲಪಾತೋತ್ಸವಕ್ಕೆ ಕ್ರಮ ಕೈಗೊಳ್ಳಲಾಗುವುದು.  – ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ