ಸಾಲಬಾಧೆ: ರೈತ ಆತ್ಮಹತ್ಯೆ

ಸೋಮವಾರಪೇಟೆ:  ಸಾಲಬಾಧೆಯಿಂದ ರೈತನೋರ್ವ ಗುಂಡು ಹಾರಿಸಿ ಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ.

ಬಗ್ಗನ ಪಿ.ಕುಶಾಲಪ್ಪ(73) ಆತ್ಮಹತ್ಯೆ ಮಾಡಿ ಕೊಂಡವರು. ಸೋಮವಾರ ಬೆಳಿಗ್ಗೆ 6.40ರ ಸುಮಾರಿಗೆ ತಮ್ಮ ಮಲಗುವ ಕೋಣೆಯಲ್ಲಿ ಕೋವಿಯಿಂದ ಎದೆ ಭಾಗಕ್ಕೆ ಗುಂಡು ಹಾರಿಸಿ ಕೊಂಡು ಮೃತಪಟ್ಟಿದ್ದಾರೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಶಾಂತಳ್ಳಿ ಕೃಷಿ ಪತ್ತಿನ ಸಹಕಾರ ಸಂಘ, ಕೆಲ ಖಾಸಗಿ ಬ್ಯಾಂಕ್‍ಗಳಲ್ಲಿ ಸಾಲವಿದ್ದು, ಕೈಸಾಲ ಸೇರಿದಂತೆ ಪಟ್ಟು 24 ಲಕ್ಷ ರೂ. ಸಾಲವಿತ್ತು. ಪ್ರಕೃತಿ ವಿಕೋಪದಿಂದ ಕಾಫಿ ಹಾಗು ಕಾಳುಮೆಣಸು ಫಸಲು ಹಾನಿಯಾಗಿರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಕಮಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಮೃತರ ನಾಲ್ವರು ಮಕ್ಕಳಲ್ಲಿ ಓರ್ವ ಪುತ್ರಿ ವಿವಾಹವಾಗಿದ್ದು, ಇನ್ನೊಬ್ಬಳ ಮದುವೆ ಅ.29ರಂದು ನಿಗದಿ ಯಾಗಿದೆ. ಮದುವೆಗೆ ಹಣ ಹೊಂದಿಸಬೇಕಾದ ಅನಿವಾರ್ಯತೆಯೂ ಇತ್ತು ಎನ್ನಲಾಗಿದೆ. ಅಲ್ಲದೆ ಪತ್ನಿ ಕಮಲ ಅವರ ಆರೋಗ್ಯ ಹದಗೆಟ್ಟಿದ್ದು, ಡಯಾಲಿಸಸ್‍ಗೆ ಹೆಚ್ಚಿನ ಹಣವನ್ನು ಭರಿಸಬೇಕಾಗುತ್ತಿತು.್ತ ಇವೆಲ್ಲಾ ಕಾರಣಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.