ಹೊಸ ವರ್ಷಾಚರಣೆ ವೇಳೆ ಅಪಘಾತಗಳಿಂದ ಸಂಭವಿಸುವ ಜೀವ ಹಾನಿ ತಡೆಯಲು ‘108’ ಸಜ್ಜು

ಮೈಸೂರು,ಡಿ.30-ಹೊಸ ವರ್ಷಾಚರಣೆ ವೇಳೆ ಸಂಭವಿಸಬಹುದಾದ ಅಪಘಾತ ಗಳಿಂದ ಉಂಟಾಗುವ ಜೀವಹಾನಿ ತಡೆಯುವ ನಿಟ್ಟಿನಲ್ಲಿ 108 ಆರೋಗ್ಯ ಕವಚ ಆಂಬು ಲೆನ್ಸ್‍ಗಳು ಸಜ್ಜಾಗಿವೆ ಎಂದು 108 ಆಂಬುಲೆನ್ಸ್ ಪ್ರೋಗ್ರಾಮ್ ಮ್ಯಾನೇಜರ್ ಟಿ.ಹೆಚ್.ನಾರಾಯಣ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾನ್ಯ ದಿನಗಳಿಗಿಂತ ಹೊಸ ವರ್ಷಾಚರಣೆಗಳಲ್ಲಿ ಶೇ.30ರಿಂದ 35ರಷ್ಟು ಅಪಘಾತ ಪ್ರಕರಣಗಳು ವರದಿಯಾಗಿವೆ. 108 ಆಂಬುಲೆನ್ಸ್ ಸೇವೆಯು ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರ ಹೊಂದಿದ್ದು, ಹಿಂದಿನ ವರ್ಷಗಳ ವರದಿಯನ್ನಾಧರಿಸಿ ಅವಶ್ಯಕತೆ ಇರುವ ಪ್ರದೇಶಗಳಲ್ಲಿ ಹೆಚ್ಚುವರಿ ಆಂಬುಲೆನ್ಸ್‍ಗಳನ್ನು ನಿಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ಸಾಪ್ತಾಹಿಕ ರಜೆಯನ್ನು ರದ್ದುಗೊಳಿಸ ಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಆಂಬುಲೆನ್ಸ್‍ಗಳಲ್ಲೂ ಇಂಧನ, ಆಮ್ಲಜನಕ ಹಾಗೂ ವೈದ್ಯಕೀಯ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ 33, ಮಂಡ್ಯದಲ್ಲಿ 21 ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ 13 ಆಂಬುಲೆನ್ಸ್ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ತುರ್ತು ಪರಿಸ್ಥಿತಿಯಲ್ಲಿ 108 ಉಚಿತ ಸಂಖ್ಯೆಗೆ ಡಯಲ್ ಮಾಡಬಹುದು ಎಂದು ನಾರಾಯಣ ತಿಳಿಸಿದ್ದಾರೆ.