ಮೈಸೂರಿನ ಪಿಕೆಟಿಬಿ ಆಸ್ಪತ್ರೆಗೆ 17 ಲಕ್ಷ ರೂ. ಮೌಲ್ಯದ ಔಷಧಿ ಕೊಡುಗೆ

ಮೈಸೂರು,ಮೇ3(ಆರ್‍ಕೆ)-ಮೈಸೂರಿನ ಹೆಸರಾಂತ ಸೈಕಲ್ ಪ್ಯೂರ್ ಅಗರ್‍ಬತ್ತಿ(ರಂಗರಾವ್ ಅಂಡ್ ಸನ್ಸ್) ಮತ್ತು ರಘುಲಾಲ್ ಅಂಡ್ ಕಂಪನಿಯಿಂದ ಪಿಕೆಟಿಬಿ ಮತ್ತು ಎದೆ ರೋಗಗಳ ಆಸ್ಪತ್ರೆಗೆ 17 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.

100 ವರ್ಷಗಳ ಇತಿಹಾಸವಿರುವ ಪಿಕೆಟಿಬಿ ಆಸ್ಪತ್ರೆಯು ಮೈಸೂರು ನಗರ ಹಾಗೂ ಜಿಲ್ಲೆಯಲ್ಲದೇ ಸುತ್ತಲಿನ ಚಾಮರಾಜನಗರ, ಕೊಡಗು, ಮಂಡ್ಯ, ಹಾಸನವಷ್ಟೇ ಅಲ್ಲದೆ, ರಾಜ್ಯದ ಇನ್ನಿತರ ಜಿಲ್ಲೆಗಳ ಟಿಬಿ ರೋಗಿಗಳಿಗೆ ಚಿಕಿತ್ಸೆ, ಆರೈಕೆ ಮಾಡುತ್ತಾ ಬಂದಿರುವುದರಿಂದ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹೆಚ್.ಎಂ. ವಿರೂಪಾಕ್ಷ ಅವರ ಕೋರಿಕೆ ಮೇರೆಗೆ ರಘುಲಾಲ್ ಅಂಡ್ ಕಂಪನಿಯಿಂದ 6 ಲಕ್ಷ ರೂ. ಬೆಲೆಯ ಔಷಧಿಗಳನ್ನು ಏಪ್ರಿಲ್ 29ರಂದು ನೀಡಲಾಯಿತು ಎಂದು ರಘುಲಾಲ್ ಮೆಡಿಕಲ್ಸ್ ಮಾಲೀಕ ರಾದ ರಾಘವನ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನನಗೆ ಪರಿಚಯವಿದ್ದ ಡಾ.ವಿರೂಪಾಕ್ಷ ಅವರು ದೂರ ವಾಣಿ ಮೂಲಕ ನನ್ನನ್ನು ಸಂಪರ್ಕಿಸಿ ಕೋವಿಡ್ ಸೋಂಕಿತರಿಗಾಗಿ ಔಷಧಿ ಅಗತ್ಯವಿದೆ ಎಂದು ಪ್ರಸ್ತಾ ಪಿಸಿದರು. ಜೊತೆಗೆ ಪಿಕೆಟಿಬಿ ಆಸ್ಪತ್ರೆಗೆ ಈ ವರ್ಷ 100 ವರ್ಷ ತುಂಬುತ್ತಿದೆ. ಲಕ್ಷಾಂತರ ಮಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಿದೆ ಎಂದಾಗ ರೋಗಿಗಳ ವೈದ್ಯಕೀಯ ಸೇವೆಗೆ ಔಷಧಿಯನ್ನು ಕೊಡಲು ನಿರ್ಧರಿಸಿ ಪೂರೈಸಿದ್ದೇನೆ ಎಂದು ರಾಘವನ್ ಹೇಳಿದರು.

ನಂತರ ಅನಿರೀಕ್ಷಿತವಾಗಿ ಸೈಕಲ್ ಅಗರ್‍ಬತ್ತೀಸ್‍ನ ಅರ್ಜುನ ರಂಗ ಅವರು ನನಗೆ ಫೋನ್ ಮಾಡಿದಾಗ ನಾನು ಔಷಧ ನೀಡುವ ಕುರಿತು ಹೇಳಿದ್ದೇ ತಡ ಅವರೂ ಸಹ ನಾನೂ ಔಷಧ ನೀಡುತ್ತೇನೆಂದು ಹೇಳಿ, ಅದರಂತೆ ಮೇ 1ರಂದು 12 ಲಕ್ಷ ರೂ. ಬೆಲೆ ಬಾಳುವ ಔಷಧಿಯನ್ನು ಪಿಕೆಟಿಬಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಿಗೆ ಹಸ್ತಾಂತರಿಸಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಡಾ.ವಿರೂಪಾಕ್ಷ, ನನ್ನ ಕೋರಿಕೆಯಂತೆ ರಘುಲಾಲ್‍ನ ರಾಘವನ್ ಹಾಗೂ ರಂಗರಾವ್ ಅಂಡ್ ಸನ್ಸ್ ಮಾಲೀಕರಾದ ಅರ್ಜುನ ರಂಗ, ಒಟ್ಟು 17 ಲಕ್ಷ ರೂ. ಬೆಲೆಯ ಔಷಧಗಳನ್ನು ಶತಮಾನೋತ್ಸವದ ಹೊಸ್ತಿಲಲ್ಲಿರುವ ನಮ್ಮ ಆಸ್ಪತ್ರೆಗೆ ಉದಾರವಾಗಿ ನೀಡಿದ್ದು, ಇದಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಹ ಮೆಚ್ಚುಗೆ ವ್ಯಕ್ತಪಡಿಸಿದರು ಎಂದರು.