29 ಆಶಾ ಕಾರ್ಯಕರ್ತೆಯರಿಗೆ ಪುಷ್ಪವೃಷ್ಟಿ, ಸನ್ಮಾನ

ಮೈಸೂರು, ಮೇ9(ಎಂಕೆ)- ಕೊರೊನಾ ಸೋಂಕು ಹರಡದಂತೆ ತಡೆಯಲು ನಗರ ದಲ್ಲಿ ಮನೆಮನೆಗೆ ತೆರಳಿ ಜಾಗೃತಿ ಮೂಡಿ ಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಶಾಸಕ ಎಸ್.ಎ.ರಾಮದಾಸ್ ಶನಿವಾರ ‘ಕೊರೊನಾ ವಾರಿಯರ್ಸ್’ ಪ್ರಶಂಸಾ ಪತ್ರ ನೀಡಿ, ಸನ್ಮಾನಿಸಿದರು.

ನಗರದ ಕಾಡಾ ಕಚೇರಿ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ 29 ಆಶಾ ಕಾರ್ಯಕರ್ತೆಯರ ಮೇಲೆ ಪುಷ್ಪವೃಷ್ಟಿಗರೆದು ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ರಾಮದಾಸ್, ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ನಗರ ಮಾತ್ರವಲ್ಲದೆ ಹಳ್ಳಿಗಳಿಗೂ ತೆರಳಿ ಮನೆ ಮನೆಗೂ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ. ಇಂತಹ ಅಮೂಲ್ಯ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆ ಯರನ್ನು ಗೌರವಿಸಬೇಕು ಎಂದು ಹೇಳಿದರು.

ಆಶಾ ಕಾರ್ಯಕರ್ತೆಯರು, ವೈದ್ಯ ಕೀಯ ಸಿಬ್ಬಂದಿಗಳ ಸೇವೆಯಿಂದ ಇಂದು ಮೈಸೂರು ಕೊರೊನಾ ಮುಕ್ತವಾಗುತ್ತಿದೆ. ಮುಂದೆಯೂ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಕೆಲಸ ಮತ್ತು ಜವಾಬ್ದಾರಿ ಇರ ಲಿದೆ. ನಗರದ ಹಲವರು ಬೇರೆ ದೇಶ, ರಾಜ್ಯ ಮತ್ತು ಜಿಲ್ಲೆಗಳಿಂದ ನಗರಕ್ಕೆ ಮರಳುತ್ತಿದ್ದು, ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕಿದೆ. ಈ ಕಾರ್ಯನಿರ್ವಹಿಸಲು ಕೊರೊನಾ ವಾರಿಯರ್ಸ್‍ಗೆ ತಾಯಿ ಚಾಮುಂಡೇಶ್ವರಿ ಹೆಚ್ಚಿನ ಶಕ್ತಿಕೊಡಲಿ ಎಂದು ಪ್ರಾರ್ಥಿಸಿದರು. ಎಲ್ಲರೂ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ. ಇತರರಲ್ಲೂ ಅರಿವು ಮೂಡಿಸಿ ಎಂದು ಮನವಿ ಮಾಡಿದರು.

ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಮುಖಂಡರಾದ ಎಂ.ಆರ್.ಬಾಲಕೃಷ್ಣ, ವಿನಯ್ ಪಾಂಚಜನ್ಯ, ಜೆ.ರವಿ, ಪಿ.ಟಿ.ಕೃಷ್ಣ, ನಾಗರತ್ನ, ರೇವತಿ, ಅನ್ನಪೂರ್ಣ, ಶಾಂತ, ಶಿವಪ್ಪ, ನಾಗರಾಜ್ ಮತ್ತಿತರರಿದ್ದರು.