ಕೊರೊನಾ ಭೀತಿಯಲ್ಲೂ ಮೈಸೂರು ಜಿಲ್ಲೆಯಲ್ಲಿ 52 ಬಾಲ್ಯವಿವಾಹ

ಮೈಸೂರು, ಆ.17(ಎಸ್‍ಪಿಎನ್)- ರಾಜ್ಯದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಬಾಲ್ಯ ವಿವಾಹ ಹೆಚ್ಚಾಗಿವೆ. ಕಳೆದ ಏಪ್ರಿಲ್‍ನಿಂದ ಜೂನ್ ಅಂತ್ಯದವರೆಗೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 52 ಬಾಲ್ಯ ವಿವಾಹಗಳು ಬೆಳಕಿಗೆ ಬಂದಿವೆ. ಇದರಲ್ಲಿ 39 ವಿವಾಹ ಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿ ದ್ದರೆ, 13 ಪ್ರಕರಣಗಳಲ್ಲಿ ವಿವಾಹ ಸಂಪನ್ನವಾಗಿ ದ್ದರೂ ಬಳಿಕ ಕಾನೂನು ಕ್ರಮ ಜರುಗಿಸಲಾಗಿದೆ.

ಕರ್ನಾಟಕ ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ (ಮೈಸೂರು ವಿಭಾಗ) ಸದಸ್ಯ ಎಂ.ಎಲ್. ಪರಶುರಾಮ್ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿ, ಮೈಸೂರು ಜಿಲ್ಲೆಯ ವಿವಿಧ ತಾಲೂಕಿಗಳಲ್ಲಿ ವರದಿಯಾದ 52 ಪ್ರಕರಣಗಳಲ್ಲಿ 39 ಬಾಲ್ಯವಿವಾಹ ಗಳನ್ನು ತಡೆಯಲಾಗಿದೆ. ನಿಯಮ ಉಲ್ಲಂಘಿಸಿ ಮದುವೆಯಾದ 13 ಜೋಡಿಗಳಲ್ಲಿ ಪತಿ ಮಹಾ ಶಯರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸ ಲಾಗಿದೆ ಎಂದು ತಿಳಿಸಿದ್ದಾರೆ.

ಅಪ್ರಾಪ್ತೆಯರನ್ನು ರಕ್ಷಿಸಿ ಬಾಲಮಂದಿರದಲ್ಲಿ ವಸತಿ ಕಲ್ಪಿಸಲಾಗಿದೆ. ಕೆಲ ಪೋಷಕರಿಗೆ ಕೌನ್ಸಿಲಿಂಗ್ ನಡೆಸಿ, ಬಾಲ್ಯವಿವಾಹದಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಗಿದೆ. ಬಳಿಕ ಅವರಿಂದ ಮುಚ್ಚಳಿಕೆ ಬರೆಸಿ ಕೊಂಡು ಅವರ ಅಪ್ರಾಪ್ತ ಪುತ್ರಿಯನ್ನು ಮನೆಗೆ ಕಳು ಹಿಸಿಕೊಡಲಾಗಿದೆ. ಈ ಅಪ್ರಾಪ್ತೆಯರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ, ಅವರೇನಾದರೂ ಪುನಃ ಮದುವೆ ಮಾಡಿಕೊಂಡಿದ್ದಾರೆಯೇ? ಎಂದು ಪರಿ ಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದರು.

ಕಳೆದ 3 ತಿಂಗಳಲ್ಲಿ ಹೆಚ್.ಡಿ.ಕೋಟೆ ತಾಲೂಕಿನಲ್ಲಿ 14 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದೆ. ಪಿರಿಯಾಪಟ್ಟಣ 9, ಕೆ.ಆರ್.ನಗರ 8, ಮೈಸೂರು ನಗರ-ಗ್ರಾಮಾಂತರ 8, ಹುಣಸೂರು 7, ನಂಜನಗೂಡಿನಲ್ಲಿ 6 ಹಾಗೂ ಮೈಸೂರು ನಗರದಲ್ಲಿ 1 ಬಾಲ್ಯವಿವಾಹವನ್ನು ತಡೆ ಹಿಡಿಯಲಾಗಿದೆ ಎಂದು ವಿವರಿಸಿದರು.

ರಾತ್ರಿ ವೇಳೆ ಸಿಕ್ಕಿಬಿದ್ದವು: ಮೈಸೂರು ಜಿಲ್ಲೆಯಲ್ಲಿ ಸಿಕ್ಕಿ ಬಿದ್ದ ಬಹುತೇಕ ಬಾಲ್ಯವಿವಾಹ ಪ್ರಕರಣಗಳು ರಾತ್ರಿ ವೇಳೆ ದಾಳಿ ನಡೆಸಿದಾಗ ಸಿಕ್ಕಿಬಿದ್ದಿವೆ. ಪೋಷಕರಿಗೆ ಅರಿವು ಮೂಡಿಸಿ, 18 ವರ್ಷ ತುಂಬುವವರೆಗೂ ಮದುವೆ ಮಾಡದಂತೆ ತಿಳಿಹೇಳಲಾಗಿದೆ ಎಂದು ತಿಳಿಸಿದರು.

ಪ್ರಮುಖ ಪಾತ್ರ: ಗ್ರಾಮೀಣ ಪ್ರದೇಶದಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ವಿಚಾರದಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪಿಡಿಒ ನೇತೃತ್ವದಲ್ಲಿ `ನಾಗರಿಕ ಜವಾಬ್ದಾರಿ ಹಕ್ಕುಬಾಧ್ಯತಾ ಸಮಿತಿ’ ರಚಿಸಲಾಗಿದ್ದು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಜನಪ್ರತಿನಿಧಿಗಳು ಸಮಿತಿ ಯಲ್ಲಿದ್ದಾರೆ. ಬಾಲ್ಯವಿವಾಹ ತಡೆಯುವಲ್ಲಿ ಈ ಸಮಿತಿಯ ಪಾತ್ರ ದೊಡ್ಡದು ಎಂದು ತಿಳಿಸಿದರು.