ಸೈಬರ್ ಕ್ರೈಂ ಪೊಲೀಸರಿಂದ 2 ತಿಂಗಳಲ್ಲಿ 7 ಆನ್‍ಲೈನ್ ವಂಚನೆ ಪ್ರಕರಣ ಬಯಲು

ಮೈಸೂರು, ಫೆ. 21 (ಆರ್‍ಕೆ)- ಕಳೆದ ಎರಡು ತಿಂಗಳಲ್ಲಿ 7 ಆನ್‍ಲೈನ್ ವಂಚನೆ ಪ್ರಕರಣ ಭೇದಿಸಿದ ಮೈಸೂರು ಜಿಲ್ಲಾ ಸೈಬರ್ ಕ್ರೈಂ ಠಾಣೆ ಪೊಲೀಸರು, 4.58 ಲಕ್ಷ ರೂ. ಹಣ ಕಳೆದುಕೊಂಡಿದ್ದವ ರಿಗೆ ಹಿಂದಿರುಗಿಸಿದ್ದಾರೆ. ದೂರು ದಾರರಾದ ಉಗ್ರೇನ್‍ಸಿಂಗ್ ಅವರಿಗೆ 1,98,000 ರೂ., ಸ್ಫೂರ್ತಿ ಎಂಬುವವರಿಗೆ 1,34,000 ರೂ., ರಮ್ಯಾ ಅವರಿಗೆ 26,500 ರೂ., ಅಂಬ್ರೋಸ್ ಅವರು ಲಕ್ಷ ರೂ. ಮರಳಿ ಪಡೆದಿದ್ದಾರೆ. ಉಳಿದಂತೆ ಪತ್ತೆ ಯಾಗಿರುವ ಇತರ ಪ್ರಕರಣಗಳ ಪೈಕಿ ಶಿವರಾಮ ಎಂಬುವವರಿಗೆ 47,500 ರೂ., ಸೋಮಂ ಬೋರೆಲ್ ಎಂಬುವವರಿಗೆ ಒಂದು ಲಕ್ಷ ರೂ. ಹಾಗೂ ರವಿ ನೀಲಕಂಠಪ್ಪರಿಗೆ 96,450 ರೂ. ಹಣವನ್ನು ಹಿಂದಿರುಗಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಕೊರೊನಾ ಪರಿಸ್ಥಿತಿಯಿಂದಾಗಿ ಕಳೆದ 2 ವರ್ಷಗಳಿಂದ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಓಟಿಪಿ, ಎಟಿಎಂ ಸೀಕ್ರೆಟ್ ನಂಬರ್, ಬ್ಯಾಂಕ್ ಖಾತೆ ಮಾಹಿತಿ ಪಡೆದುಅಮಾಯಕರ ಖಾತೆಯಿಂದ ಹಣ ಟ್ರಾನ್ಸ್‍ಫರ್ ಮಾಡಿಕೊಳ್ಳುವುದು, ನಿಮಗೆ ಭಾರೀ ಮೊತ್ತದ ಉಡುಗೊರೆ ಬಂದಿದೆ, ಬಿಡಿಸಿಕೊಳ್ಳಲು ಸೇವಾ ಶುಲ್ಕ ಪಾವತಿ ಸಬೇಕೆಂದು ಹೇಳಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿಸಿಕೊಳ್ಳುವುದು, ರೈಲ್ವೇ, ಏರ್ ಫೋರ್ಸ್‍ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕ, ಯುವತಿಯರಿಂದ ಆನ್‍ಲೈನ್‍ನಲ್ಲಿ ಹಣ ತರಿಸಿಕೊಂಡು ಡ್ರಾ ಮಾಡಿ ವಂಚಿಸುವುದೂ ಸೇರಿದಂತೆ ವಿವಿಧ ವಿಧಗಳಲ್ಲಿ ಹಣ ಲಪಟಾಯಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಮೈಸೂರಿನ ಎಸ್ಪಿ ಕಚೇರಿ ಬಳಿ ಜಲಪುರಿ ಪೊಲೀಸ್ ಕ್ರಾರ್ಟರ್ಸ್‍ನಲ್ಲಿರುವ ಜಿಲ್ಲಾ ಸೈಬರ್ ಕ್ರೈಂ ಎಕನಾಮಿಕ್ ಅಫೆನ್ಸಸ್ ಅಂಡ್ ನಾರ್ಕೋಟಿಕ್ಸ್ (ಸಿಇಎನ್) ಠಾಣೆ ಇನ್ಸ್‍ಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಸಬ್ ಇನ್ಸ್‍ಪೆಕ್ಟರ್‍ಗಳಾದ ಕೃಷ್ಣಕಾಂತ ಕೋಳಿ, ಯಶವಂತಕುಮಾರ್, ಬಿಇ ಪದವೀಧರ ಪೊಲೀಸ್ ಕಾನ್‍ಸ್ಟೇಬಲ್ ರಂಗಸ್ವಾಮಿ ಹಾಗೂ ಸಿಬ್ಬಂದಿ ಆನ್‍ಲೈನ್‍ನಲ್ಲಿ ನಡೆಯುವ ಸೈಬರ್ ಸ್ವರೂಪದ ಮೋಸ, ವಂಚನೆ ಪ್ರಕರಣಗಳನ್ನು ತಂತ್ರಜ್ಞಾನ ಬಳಸಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರು, ಶಿಕ್ಷಕರು, ಪ್ರಾಧ್ಯಾಪಕರು, ಸರ್ಕಾರಿ ಅಧಿಕಾರಿಗಳೇ ತಮ್ಮ ಎಟಿಎಂ, ಬ್ಯಾಂಕ್ ಖಾತೆ ಮಾಹಿತಿ ಓಟಿಪಿ ನಂಬರ್ ನೀಡುವ ಮೂಲಕ ಮೋಸದ ಬಲೆಗೆ ಬೀಳುತ್ತಿರುವುದು ಅಚ್ಚರಿ ಮೂಡಿಸಿದೆ.