ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲೂ 800 ಹಾಸಿಗೆ ಸಾಮಥ್ರ್ಯದ ಕೋವಿಡ್ ಕೇರ್ ಸೆಂಟರ್

ಮೈಸೂರು, ಜು. 14 (ಆರ್‍ಕೆ)- ಕೊರೊನಾ ವೈರಸ್ ಸೋಂಕು ಸ್ಫೋಟಗೊಂಡಿರುವುದರಿಂದ ಸೋಂಕಿತರ ಚಿಕಿತ್ಸೆಗೆ ಮೈಸೂರು ಜಿಲ್ಲಾಡಳಿತ ವ್ಯಾಪಕ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೈಸೂರಿನ ಹೊರ ವಲಯದ ಮಂಡಕಳ್ಳಿ ವಿಮಾನ ನಿಲ್ದಾಣದ ಬಳಿ ಇರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‍ಒಯು)ದ ಶೈಕ್ಷಣಿಕ ಭವನ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿ ಮೂಲ ಸೌಕರ್ಯ ಒದಗಿಸಿರುವ ಬೆನ್ನಲ್ಲೇ ಇದೀಗ ಮೈಸೂರು ನಗರದ ನಜರ್ ಬಾದ್‍ನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣ ವನ್ನು ಎರಡನೇ ಕೋವಿಡ್ ಕೇರ್ ಸೆಂಟರ್ ಆಗಿ ಬಳಸಿಕೊಳ್ಳಲು ಜಿಲ್ಲಾಡಳಿತ ತಯಾರಿ ನಡೆಸುತ್ತಿದೆ.

ಸರ್ಕಾರ ಕಾಲ ಕಾಲಕ್ಕೆ ನೀಡುತ್ತಿರುವ ಕೋವಿಡ್-19 ನಿರ್ವಹಣೆ ಕುರಿತ ಮಾರ್ಗಸೂಚಿ ನಿಯಮ ಗಳನ್ನು ಅಳವಡಿಸಿಕೊಂಡು ವಸತಿ ಶಾಲೆ, ಕ್ರೀಡಾಂ ಗಣ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಆಸ್ಪತ್ರೆ ಕಟ್ಟಡ ಗಳನ್ನು ಕೊರೊನಾ ವೈರಸ್ ಸೋಂಕಿ ತರ ಆರೈಕೆಗಾಗಿ ಮೈಸೂರು ಜಿಲ್ಲಾಡಳಿತವು ಸಜ್ಜುಗೊಳಿಸುತ್ತಿದೆ.

ಸೋಮವಾರದವರೆಗೆ ಮೈಸೂ ರಿನಲ್ಲಿ 447 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, 37 ಮಂದಿ ಸಾವ ನ್ನಪ್ಪಿರುವುದರಿಂದ ಮತ್ತಷ್ಟು ಕೋವಿಡ್ ಕೇರ್ ಸೆಂಟರ್‍ಗಳನ್ನು ಸಿದ್ಧಪಡಿಸ ಲಾಗುತ್ತಿದ್ದು, ಕ್ರೀಡಾ ಚಟುವಟಿಕೆ ಗಳು ಸ್ಥಗಿತಗೊಂಡಿರುವುದರಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿರುವ ವಿಶಾಲ ಒಳಾಂಗಣ ಕ್ರೀಡಾಂಗಣ ವನ್ನು 800 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುತ್ತಿದೆ.

ಮೈಸೂರಲ್ಲಿ ಕೋವಿಡ್ ಪಾಸಿಟಿವ್‍ನಂತೆ ಸಾವಿನ ಪ್ರಕರಣಗಳೂ ಹೆಚ್ಚುತ್ತಿರುವುದರಿಂದ ಸೋಂಕಿತರನ್ನು ದಾಖಲಿಸುವ ಸಲುವಾಗಿ ಜಿಲ್ಲಾ ಧಿಕಾರಿ ಅಭಿರಾಂ ಜಿ. ಶಂಕರ್, ಭಾನುವಾರ ಚಾಮುಂಡಿ ವಿಹಾರ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಹಾ ಯಕ ನಿರ್ದೇಶಕ ಕೆ.ಸುರೇಶ್ ಅವರೊಂದಿಗೆ ಚರ್ಚಿಸಿ ಒಳಾಂಗಣ ಕ್ರೀಡಾಂಗಣವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಸಹಕರಿಸು ವಂತೆ ಸೂಚಿಸಿದರು.

ಅಲ್ಲಿನ ಎರಡು ಡಾರ್ಮಿಟರಿ ಮತ್ತು 1 ವಾರ್ಮ್ ಅಪ್ ಹಾಲ್ ಅನ್ನು ಮಹಿಳಾ ಸೋಂಕಿತರಿಗಾಗಿ ಅಣಿಗೊಳಿಸಿ ಪ್ರವೇಶ ಮತ್ತು ನಿರ್ಗ ಮನಕ್ಕೆ ಪ್ರತ್ಯೇಕ ದ್ವಾರ ನಿರ್ಮಿಸ ಬೇಕು. ಉಳಿದ ಜಾಗದಲ್ಲಿ ಪುರುಷರಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿಗೆ ಸೌಲಭ್ಯ ಒದಗಿಸು ವಂತೆ ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್ ಅವರಿಗೆ ಸಲಹೆ ನೀಡಿದರು.

ಮರದ ನೆಲ ಹಾಸು ಮತ್ತು ಸಿಂಥೆಟಿಕ್ ನೆಲಹಾಸಿ ರುವುದರಿಂದ ಅದಕ್ಕೆ ಹಾನಿ ಆಗದಂತೆ ಕ್ರಮ ವಹಿಸ ಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ 800 ಹಾಸಿಗೆ ಗಳ ವ್ಯವಸ್ಥೆ ಮಾಡಿ, ಶೌಚಾಲಯ, ಕುಡಿಯಲು ಮತ್ತು ಸ್ನಾನಕ್ಕೆ ಬಿಸಿ ನೀರು ಕಲ್ಪಿಸಿ, ಮನರಂಜನೆಗಾಗಿ ಟಿವಿ, ಕ್ರೀಡಾ ಚಟುವಟಿಕೆಗೆ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಅದರಂತೆ ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್, ತಮ್ಮ ಇಂಜಿನಿಯರ್‍ಗಳೊಂದಿಗೆ ಸೋಮವಾರ ಉದ್ದೇಶಿತ ಕೋವಿಡ್ ಕೇರ್ ಸೆಂಟರ್‍ಗೆ ಅಗತ್ಯ ವಿರುವ ಸಲಕರಣೆಗಳ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು. ಇಂದು ಬೆಳಿಗ್ಗೆಯಿಂದ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ಸಕಲ ರೀತಿಯ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ನಜರ್‍ಬಾದ್ ಠಾಣೆ ಇನ್ಸ್ ಪೆಕ್ಟರ್ ಜಿ.ಎನ್.ಶ್ರೀಕಾಂತ್ ಇದಕ್ಕೆ ಸಹಕರಿಸುತ್ತಿದ್ದಾರೆ.