ಬಾರ್‍ನಲ್ಲಿ 86 ಸಾವಿರ ರೂ. ಮೌಲ್ಯದ ಮದ್ಯ ಕಳವು

ಮೇ.3 ರವರೆಗೂ ಮದ್ಯ ಮಾರಾಟ ಬಂದ್; ಅಬಕಾರಿ ಡಿಸಿ ಆದೇಶ
ಮಂಡ್ಯ, ಏ.20(ನಾಗಯ್ಯ)- ತಾಲೂಕಿನ ಚಂದಗಾಲು ಗ್ರಾಮದ ಪ್ರಿಯ ಬಾರ್ ಮತ್ತು ರೆಸ್ಟೋರೆಂಟ್‍ನ ಶೆಟರ್ ಮುರಿದು ಸುಮಾರು 86 ಸಾವಿರ ರೂ. ಮೌಲ್ಯದ ಮದ್ಯವನ್ನು ಕಳವು ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗ್ರಾಮದ ಹೊರವಲಯದಲ್ಲಿರುವ ಪ್ರಿಯಾ ಬಾರ್‍ನ ಶೆಟರ್ ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು 12 ಕೇಸ್ ಮದ್ಯ ಹಾಗೂ 27 ಕೇಸ್ ಬಿಯರ್ ಹಾಗೂ ಕ್ಯಾಸ್ ಕೌಂಟರ್‍ನಲ್ಲಿದ್ದ 3 ಸಾವಿರ ನಗದನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಬಾರ್ ಕ್ಯಾಷಿಯರ್ ಲಿಂಗರಾಜು ನೀಡಿದ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಅಬಕಾರಿ ಇಲಾಖೆ ಉಪ ಆಯುಕ್ತ ಬಿ.ಶಿವಪ್ರಸಾದ್, ಎಸ್‍ಐ ಚಂದ್ರಕುಮಾರ್, ಇನ್ಸ್‍ಪೆಕ್ಟರ್ ಶಿವಶಂಕರ್ ನೇತೃತ್ವ ತಂಡ ಪರಿಶೀಲನೆ ನಡೆಸಿತು. ಈ ಸಂಬಂಧ ಶಿವಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮದ್ಯ ಬಂದ್: ಕೊರೊನಾ ಹಿನ್ನೆಲೆಯಲ್ಲಿ ಈ ಹಿಂದೆ ನೀಡಿದ ಆದೇಶದ ಅನ್ವಯ ಏ.20ರ ಮಧ್ಯರಾತ್ರಿಯವರೆಗೆ ಜಿಲ್ಲಾ ವ್ಯಾಪ್ತಿಯ ಮದ್ಯಮಾರಾಟದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿತ್ತು. ಆದರೆ ಬೆಂಗಳೂರು ಅಬಕಾರಿ ಆಯುಕ್ತರು ಇಂದು ಹೊರಡಿಸಿರುವ ಆದೇಶದ ಪ್ರಕಾರ ಮೇ.3 ರವರೆಗೂ ಮದ್ಯ ಮಾರಾಟಮಾಡುವ ಎಲ್ಲಾ ಅಂಗಡಿಗಳನ್ನು ಬಂದ್ ಮಾಡುವಂತೆ ಅಬಕಾರಿ ಉಪಆಯುಕ್ತ ಬಿ.ಶಿವಪ್ರಸಾದ್ ಆದೇಶ ಹೊರಡಿಸಿದ್ದಾರೆ. ಎಲ್ಲಾ ಮದ್ಯದ ಅಂಗಡಿಗಳು ಈ ಆದೇಶವನ್ನು ಪಾಲಿಸಬೇಕು, ಒಂದು ವೇಳೆ ಯಾವುದಾದರೂ ಲೋಪ ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.