ಮೈಸೂರಲ್ಲಿಯುದ್ಧ ಸ್ಮಾರಕ ನಿರ್ಮಾಣಕ್ಕೆಮುಹೂರ್ತ ಫಿಕ್ಸ್

ಮೈಸೂರು, ಜು.26- ಸಾಂಸ್ಕøತಿಕ ನಗರಿ ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಸನ್ನಿಹಿತ ವಾಗಿದೆ. ಇದರೊಂದಿಗೆ 22 ವರ್ಷಗಳ ಬೇಡಿಕೆ ಈಡೇರಲಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ಎನ್‍ಸಿಸಿ ಪರೇಡ್ ಮೈದಾನದಲ್ಲಿ ನಿರ್ಮಿ ಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ನಿರ್ಮಾಣ ಕಾಮಗಾರಿಗೆ ಜು.29ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಚಾಲನೆ ನೀಡಲಿದ್ದಾರೆ.

ಮುಂದಿನ ಗಣರಾಜ್ಯೋತ್ಸವದ ವೇಳೆಗೆ ಸ್ಮಾರಕ ತಲೆ ಎತ್ತಲಿದೆ. ಈಗಾಗಲೇ ಸ್ಮಾರಕ ನಿರ್ಮಾ ಣಕ್ಕೆ ಸ್ಥಳ ಗುರುತಿಸಲಾಗಿದ್ದು, ಹೆರಿಟೇಜ್ ಕಮಿಟಿ ಯಿಂದ ಅನುಮೋದನೆ ಪಡೆಯಲಾಗಿದೆ. ಸ್ಮಾರಕದ ವಿನ್ಯಾಸಕ್ಕೂ ಅನುಮತಿ ದೊರೆತ್ತಿದ್ದು, ಈಗಾ ಗಲೇ ವರ್ಕ್ ಆರ್ಡರ್ ನೀಡಲಾಗಿದೆ. ಮೈಸೂ ರಿನ ಶಿಲ್ಪಿಯೊಬ್ಬರಿಗೆ ಸ್ಮಾರಕದ ಕಲ್ಲಿನ ಪಾಲಿಶ್ ಸೇರಿದಂತೆ ಅಂತಿಮ ರೂಪ ನೀಡುವ ಜವಾ ಬ್ದಾರಿ ವಹಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. 2000ರಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ವೀಕೇರ್ ನಿವೃತ್ತ ಸೈನಿಕರ ಟ್ರಸ್ಟ್‍ನ ಎಂ.ಎನ್.ಸುಬ್ರಹ್ಮಣಿ ರಾಜ್ಯ ಸರ್ಕಾರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ 2010ರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿದರು. ಆಗ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಸ್ಥಳ ಹುಡುಕುವ ಪ್ರಕ್ರಿಯೆ ಆರಂಭವಾಗಿತ್ತು. ನಂತರ ಅದು ನೆನೆಗುದಿಗೆ ಬಿದ್ದಿತ್ತು. 2012ರಲ್ಲಿ ಮತ್ತೆ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಆರಂಭವಾಯಿತು. 2016ರಲ್ಲಿ ನಿವೃತ್ತ ಯೋಧರೂ ಆದ ಮೈಸೂರು ಉಪ ವಿಭಾಗಾ ಧಿಕಾರಿ ಸಿ.ಎಲ್.ಆನಂದ್(ಹಾಲಿ ಬಿಡಿಎ ಕಾರ್ಯದರ್ಶಿ) ಅವರು ಯುದ್ಧ ಸ್ಮಾರಕ ನಿರ್ಮಾಣಕ್ಕೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಈಗ ಸ್ಮಾರಕ ನಿರ್ಮಾಣ ಅಂತಿಮ ಘಟ್ಟ ತಲುಪಿದೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯ ಎಡ ಭಾಗದಲ್ಲಿರುವ ಸುಮಾರು ಐದು ಎಕರೆ ವಿಸ್ತೀರ್ಣದ ಎನ್‍ಸಿಸಿ ಪರೇಡ್ ಜಾಗದಲ್ಲಿ 4 ಚದರ ಅಡಿ ವಿಸ್ತೀರ್ಣದಲ್ಲಿ ಯುದ್ಧ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಅಲ್ಲದೆ ಹಿಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಆ ಜಾಗ ವನ್ನು ಮಂಜೂರು ಮಾಡಿದ್ದರು. ಈ ಹಿಂದೆ ಮೇಜರ್ ಜನರಲ್ ಸಿ.ಕೆ.ಕರುಂಬಯ್ಯ ನೇತೃತ್ವದಲ್ಲಿ ರಚಿಸಲಾಗಿದ್ದ ಯುದ್ಧಸ್ಮಾರಕ ನಿರ್ಮಾಣ ಸಮಿತಿಯ ಸಭೆಯಲ್ಲಿ ಸಿ.ಎಲ್.ಆನಂದ್, ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಮೈದಾನÀದಲ್ಲಿ ಸ್ಮಾರಕ ನಿರ್ಮಾಣ ನಕ್ಷೆಯನ್ನು ಮಂಡಿಸಿದ್ದರು. ಇದಕ್ಕೆ ಯುದ್ಧಸ್ಮಾರಕ ಸಮಿತಿ ಒಪ್ಪಿಗೆ ಸೂಚಿಸಿದ್ದರಿಂದ ಜಿಲ್ಲಾಡಳಿತ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಂದಿನ ಸರ್ಕಾರ ಯುದ್ಧ ಸ್ಮಾರಕ ನಿರ್ಮಾಣಕ್ಕೆ 1.41 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸಮ್ಮತಿಸಿ, ಮುಂಗಡವಾಗಿ 50 ಲಕ್ಷ ರೂ. ಬಿಡುಗಡೆ ಮಾಡಿತ್ತು.

1.50 ಕೋಟಿ ರೂ. ಮೌಲ್ಯದ ಕಲ್ಲು ಕೊಡುಗೆ: ಸ್ಮಾರಕ ನಿರ್ಮಾಣಕ್ಕಾಗಿ ಚಾಮರಾಜ ನಗರ ಜಿಲ್ಲೆಯ ಕ್ವಾರಿಯಿಂದ 33 ಕ್ಯೂಬಿಕ್ ಮೀಟರ್ ಉತ್ಕøಷ್ಟ ಕಲ್ಲುಗಳ ಸ್ಲಾಬ್ ಮೈಸೂರಿಗೆ ತರಲಾಗಿದೆ. ಸ್ಮಾರಕವನ್ನು ಕಾಂಕ್ರಿಟ್ ಕಟ್ಟಡಕ್ಕೆ ಸೀಮಿತಗೊಳಿಸದೆ ಕಲ್ಲಿನ ಸ್ಲಾಬ್ ಬಳಸಿ ಪಾರಂಪರಿಕ ಶೈಲಿಯಲ್ಲಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಚಾಮರಾಜನಗರ ಎಡಿಸಿಯಾಗಿದ್ದ ಸಿ.ಎಲ್.ಆನಂದ್, ಜಿಲ್ಲೆಯ ಅಮಚವಾಡಿ ನಿವಾಸಿ ಕ್ವಾರಿ ಮಾಲೀಕ ಹೆಚ್.ಎಂ.ಪುಟ್ಟಮಾದಯ್ಯ ಬಿನ್ ಪಟೇಲ್ ಮಾದಪ್ಪ ಎಂಬು ವವರಿಂದ 33 ಕ್ಯೂಬಿಕ್ ಮೀಟರ್ ಕಪ್ಪು ಶಿಲೆ(ಉತ್ಕøಷ್ಟ ಕಲ್ಲು)ಯನ್ನು ಸರ್ಕಾರಕ್ಕೆ ರಾಜಧನ ಹಾಗೂ ವಿವಿಧ ಶುಲ್ಕ ತಾವೇ ಪಾವತಿಸಿ ಸ್ಮಾರಕ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಕ್ವಾರಿಯಿಂದ 300 ಟನ್ ತೂಕದ ಕಚ್ಛಾಶಿಲೆಯನ್ನು ಚಾಮರಾಜನಗರದ ಎಸ್‍ವಿಜಿ ಗ್ರಾನೈಟ್ಸ್ ಮಾಲೀಕ ಎ.ಶ್ರೀನಾಥ್ ಬಿನ್ ಶಿವಶಂಕರ್‍ರೆಡ್ಡಿ ಯಾವುದೇ ಹಣ ಪಡೆಯದೇ ಸ್ಮಾರಕ ನಿರ್ಮಾಣಕ್ಕೆ ಅನುಗುಣವಾಗಿ ಬೇಕಾದ ಆಕಾರದಲ್ಲಿ ಕತ್ತರಿಸಿಕೊಟ್ಟಿದ್ದರು. ಕಲ್ಲು ಕತ್ತರಿಸಲು ನೀಡಬೇಕಾಗಿದ್ದ ಶುಲ್ಕ ಸೇರಿದಂತೆ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ 300 ಟನ್ ತೂಕದ ಕಲ್ಲನ್ನು ಸ್ಮಾರಕ ನಿರ್ಮಾಣದ ಸ್ಥಳಕ್ಕೆ ಕಳೆದ 8 ತಿಂಗಳ ಹಿಂದೆಯೇ ತರಲಾಗಿದೆ.

48 ಅಡಿ ಎತ್ತರ: ಸ್ಮಾರಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕ 48 ಅಡಿ ಎತ್ತರ ಬರಲಿದೆ. 33 ಕ್ಯೂಬಿಕ್ ಮೀಟರ್ ಎತ್ತರ ಕಲ್ಲನ್ನು ಕೂರಿಸಿದರೆ 33 ಅಡಿ ಎತ್ತರ ಆಗಲಿದೆ. ಅದಕ್ಕೂ ಮುನ್ನ 10 ಅಡಿ ಫೌಂಡೇಷನ್ ಇರುತ್ತದೆ. ಕಲ್ಲಿನ ಮೇಲೆ 5 ಅಡಿ ಎತ್ತರ ಅಶೋಕ ಲಾಂಛನ ಅಳವಡಿಸಲಾಗುತ್ತದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿರುವ ಸಾರನಾಥ ಅಶೋಕ್ ಎಂಬ್ಲಂ ಅನ್ನು ಮೈಸೂರಿನ ಯುದ್ಧ ಸ್ಮಾರಕದಲ್ಲಿ ಅಳವಡಿಸಲಾಗುತ್ತದೆ. ಸ್ಮಾರಕಕ್ಕೆ ಬಳಸುವ ಕಲ್ಲಿಗೆ ಪಾಲಿಶ್ ಮಾಡಿದ ನಂತರ ಅಮೇರಿಕನ್ ವೈಟ್ ಪೇಯಿಂಟ್‍ನಿಂದ ಅಕ್ಷರ ಬರೆಯುವುದರಿಂದ ಲೈಫ್ ಲಾಂಗ್ ಅಕ್ಷರ ಮಾಸುವುದಿಲ್ಲ. ಪಾಲಿಶ್ ಮಾಡಿದ ನಂತರ ಜೆಟ್ ಬ್ಲಾಕ್ ಕಲರ್ ಆಗುತ್ತದೆ.

ಸ್ಮಾರಕದಲ್ಲಿ: ಪಾರಂಪರಿಕ ಶೈಲಿಯಲ್ಲಿಯೇ ಸ್ಮಾರಕ ನಿರ್ಮಾಣವಾಗಲಿದ್ದು, ಚೌಕಾಕಾರದಲ್ಲಿ ನಿರ್ಮಿಸಲಾಗುತ್ತದೆ. ಒಂದು ಭಾಗದಲ್ಲಿ ಮೂರು ವಿಧದ ಸೈನ್ಯದ ಸಂಕೇತದೊಂದಿಗೆ ದ್ವಾರ ನಿರ್ಮಿಸಲಾಗುತ್ತದೆ. ನಂತರ ಉಳಿದ ಮೂರು ಬದಿಯಲ್ಲಿ ಭೂ ಸೇನೆ, ವಾಯು ಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‍ಗಳು, ಯುದ್ಧ ವಿಮಾನಗಳು, ನೌಕೆ, ಗನ್ ಸೇರಿದಂತೆ ಯುದ್ಧದಲ್ಲಿ ಬಳಸುವ ಪರಿಕರಗಳನ್ನು ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸರ್ಕಾರದಿಂದ ರಕ್ಷಣಾ ಇಲಾಖೆಗೆ ಪತ್ರ ಬರೆದು ಟ್ಯಾಂಕರ್, ಗನ್ ಸೇರಿದಂತೆ ಇನ್ನಿತರ ಪರಿಕರಗಳನ್ನು ತರಲು ಪ್ರಯತ್ನಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.