ಮೈಸೂರು, ಮೇ10(ಆರ್‍ಕೆಬಿ)-ವಿಶ್ವಾದ್ಯಂತ ಕಾಡುತ್ತಿರುವ ಕೊರೊನಾ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ತಲಾ 20 ಗ್ರಾಂ ಬೆಳ್ಳಿಯ ನಾಣ್ಯ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣೆಯ 90 ಸಿಬ್ಬಂದಿಗೆ ಬೆಳ್ಳಿ ನಾಣ್ಯವಿರುವ ವಿಭಿನ್ನ ವಿನ್ಯಾಸದ `ಕೃತಜ್ಞತಾ ಬಾಕ್ಸ್’ಗಳನ್ನು ಭಾನುವಾರ ವಿತರಿಸಿ ದರು. ಲಾಕ್‍ಡೌನ್ ವೇಳೆ ನಾವೆಲ್ಲರೂ ಮನೆಯಲ್ಲಿ ಆರಾಮವಾಗಿ ಇರುವಂತೆ ಮಾಡಿದ ಪೊಲೀಸ್ ಸಿಬ್ಬಂದಿ, ರಜೆ ತೆಗೆದುಕೊಳ್ಳದೇ ಕೆಲಸ ಮಾಡಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಒತ್ತಡದ ನಡುವೆಯೂ ಜನರ ಸಹಾಯಕ್ಕೆ ನಿಂತಿದ್ದಾರೆ. ಹಾಗಾಗಿ ಅವರಿಗೆ ಕೃತಜ್ಞತೆ ಹೇಳಲೇಬೇಕಾದುದು ನಮ್ಮ ಕರ್ತವ್ಯ ಎಂದರು.
ರೆಡ್ ಜೋನ್‍ನಲ್ಲಿರುವ ಮೈಸೂರನ್ನು ಗ್ರೀನ್ ಜೋನ್‍ಗೆ ತರಲು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮತ್ತು ಮೈಸೂರು ನಗರ ಪೊಲೀಸ್ ಅಯುಕ್ತ ಚಂದ್ರಗುಪ್ತ ಕಾರ್ಯ ಶೈಲಿಯನ್ನು ಶ್ರುತಿ ನಾಯ್ಡು ಪ್ರಶಂಸಿಸಿದರು. ಈ ಸಂದರ್ಭ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಇನ್ಸ್‍ಪೆಕ್ಟರ್ ಜಿ.ಸಿ.ರಾಜು ಇನ್ನಿತರರಿದ್ದರು.