ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಶಿಕ್ಷಕಿ ಹತ್ಯೆ ನಂಜನಗೂಡು ನಗರಸಭೆ ಸದಸ್ಯ ಸೇರಿ ನಾಲ್ವರ ಬಂದನ

ಮೈಸೂರು, ಆ.4(ಆರ್‍ಕೆ)- ಕಳೆದ 5 ತಿಂಗಳ ಹಿಂದೆ ನಡೆದಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಿಕ್ಷಕಿ ಸುಲೋಚನಾ ಹತ್ಯೆ ಪ್ರಕರಣವನ್ನು ಭೇದಿಸಿರುವ ನಂಜನಗೂಡು ಪೊಲೀಸರು ನಗರ ಸಭಾ ಸದಸ್ಯೆ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಂಜನಗೂಡು ನಗರಸಭೆ ಸದಸ್ಯೆ ಗಾಯತ್ರಿ ಮುರುಗೇಶ್, ಆಕೆಯ ಸಂಬಂಧಿಕರಾದ ಸೌಭಾಗ್ಯ, ನಾಗಮ್ಮ ಮತ್ತು ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಗುರುವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಶಿಕ್ಷಕಿಯೊಂದಿಗೆ ಗಾಯತ್ರಿ ಪತಿ ಮುರುಗೇಶ್ ಅಕ್ರಮ ಸಂಬಂಧ ಹೊಂದಿದ್ದರು ಎಂಬುದೇ ಸುಲೋಚನಾ ರನ್ನು ಕೊಲೆಗೈಯ್ಯಲು ಪ್ರಮುಖ ಕಾರಣವಾಗಿದ್ದು, ಪತಿಗೆ ಗೊತ್ತಿಲ್ಲದಂತೆಯೇ ಗಾಯತ್ರಿ ತನ್ನ ಮೈದುನ, ಓರಗಿತ್ತಿ ಹಾಗೂ ಸಂಬಂಧಿ ನೆರವಿನೊಂದಿಗೆ ಸ್ಕೆಚ್ ಹಾಕಿ ಸುಲೋಚನಾಳನ್ನು ಕೊಲೆ ಮಾಡಿದ್ದಾಳೆ ಎಂಬುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸುಲೋಚನಾ ಪತಿ ನಿಧನರಾದ ನಂತರ ನಂಜನಗೂಡು ಟೌನ್‍ನ ಸಭಾಪತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸ ವಾಗಿದ್ದರು. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ದಲ್ಲಿ ಡಿ ಗ್ರೂಪ್ ನೌಕರನಾಗಿದ್ದ ನಗರಸಭಾ ಸದಸ್ಯೆ ಗಾಯತ್ರಿ ಪತಿ ಮುರುಗೇಶ್ ಶಿಕ್ಷಕಿ ಸುಲೋಚನಾ ಜೊತೆÀ ಸಂಬಂಧವಿಟ್ಟುಕೊಂಡು ಆಕೆಯ ಖರ್ಚು-ವೆಚ್ಚವನ್ನೆಲ್ಲ ನೋಡಿಕೊಳ್ಳುತ್ತಿದ್ದನಲ್ಲದೆ, ನಾಗಮಂಗಲಕ್ಕೆ ಸುಲೋಚನಾ ಪುತ್ರಿ ಮದುವೆಯಾದಾಗ ಅದರ ಜವಾಬ್ದಾರಿಯನ್ನು ಆತನೇ ವಹಿಸಿದ್ದ ಎನ್ನಲಾಗಿದ್ದು, ಆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಗಾಯಿತ್ರಿ ಹಲವು ಬಾರಿ ಗಲಾಟೆ ಮಾಡಿದ್ದಳಾದರೂ, ಅವರಿಬ್ಬರ ಅಕ್ರಮ ಸಂಬಂಧ ಮುಂದು ವರಿದಿದ್ದರಿಂದ ಸುಲೋಚನಾಳನ್ನು ಮುಗಿಸಿಬಿಡಲು ಯೋಜನೆ ರೂಪಿಸಿ, ಆಕೆ, ಸಂಬಂಧಿಕರಾದ ಸೌಭಾಗ್ಯ, ನಾಗಮ್ಮ ಹಾಗೂ ಕುಮಾರನ ಸಹಾಯದಿಂದ ಮಾರ್ಚ್ 8ರಂದು ರಾತ್ರಿ ಸುಲೋಚನಾ ಮನೆಯಲ್ಲೇ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಂಜನಗೂಡು ಟೌನ್ ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ ತಳವಾರ್ ನೇತೃತ್ವದಲ್ಲಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರಾದರೂ, ಆರೋಪಿಗಳ್ಯಾರು ಎಂಬುದರ ಬಗ್ಗೆ ಸುಳಿವು ದೊರೆತಿರಲಿಲ್ಲ. ಕಡೆಗೆ ಈ ಹಿಂದೆ ಸುಲೋಚನಾಳೊಂದಿಗೆ ಜಗಳ ಮಾಡಿದ್ದ ಗಾಯತ್ರಿಯ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೂವರು ಸಂಬಂಧಿಕರೊಂದಿಗೆ ಸೇರಿ ತಾನೇ ಶಿಕ್ಷಕಿ ಸುಲೋಚನಾಳನ್ನು ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂಜನಗೂಡು ಪಟ್ಟಣ ಠಾಣೆ ಇನ್ಸ್‍ಪೆಕ್ಟರ್ ಲಕ್ಷ್ಮೀಕಾಂತ ಕೆ.ತಳವಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲ್ಲಿ ಸಬ್ ಇನ್ಸ್‍ಪೆಕ್ಟರ್‍ಗಳಾದ ವಿಜಯರಾಜ್, ಬಿ.ಮಹೇಂದ್ರ, ಟಿ.ಆರತಿ, ಸಿಬ್ಬಂದಿಗಳಾದ ಸತೀಶ, ಅಶೋಕ್, ಲೋಕೇಶ, ಶಿವಕುಮಾರ್, ನಾಗೇಂದ್ರ, ರಾಜು ಹಾಗೂ ಶ್ರೀದೇವಿ ಗಾಣಿಗೇರ ಅವರು ಪಾಲ್ಗೊಂಡಿದ್ದರು.