ಮೈಸೂರಿನ ಸರಸ್ವತಿಪುರಂ, ವಿಜಯನಗರದ ಆಧಾರ್ ಸೇವಾ ಕೇಂದ್ರ ಪುನರಾರಂಭ

ಮೈಸೂರು,ಮೇ 27(ಎಂಟಿವೈ)-ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಬಂದ್ ಮಾಡಲಾಗಿದ್ದ ಮೈಸೂರಿನ ಸರಸ್ವತಿಪುರಂ ಹಾಗೂ ವಿಜಯನಗರದಲ್ಲಿರುವ ಆಧಾರ್ ಸೇವಾ ಕೇಂದ್ರಗಳು ಪುನರಾರಂಭವಾಗಿದ್ದು, ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಂಡಿವವರಿಗೆ ಮಾತ್ರ ಸೇವೆ ಒದಗಿಸುತ್ತಿದೆ.

ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಿಗೂ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದ್ದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ಎಲ್ಲೆಡೆ ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವುದೇ ಒಂದು ದೊಡ್ಡ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಿಧ ಸೇವಾ ಕೇಂದ್ರಗಳಲ್ಲದೇ ಮೈಸೂರಿನ ವಿಜಯನಗರದಲ್ಲಿ ಪ್ರತ್ಯೇಕ ಆಧಾರ್ ಕೇಂದ್ರವನ್ನು ಆರಂಭಿಸಲಾಗಿತ್ತು. ಕೊರೊನಾ ಹಿನ್ನೆಲೆ ಯಲ್ಲಿ ಮಾರ್ಚ್ ತಿಂಗಳಲ್ಲಿ ಆಧಾರ್ ಕೇಂದ್ರವನ್ನು ಬಂದ್ ಮಾಡಿಸಲಾಗಿತ್ತು. ಆದರೆ ಲಾಕ್‍ಡೌನ್ ನಿಯಮ ಸಡಿಲಿಕೆಯಿಂದಾಗಿ ಇದೀಗ ಎರಡು ಆಧಾರ್ ಕೇಂದ್ರಗಳು ಪುನರಾರಂಭವಾಗಿದ್ದು, ಸುರಕ್ಷತಾ ಕ್ರಮ ಅನುಸರಿಸಿ ಸೇವೆ ನೀಡುತ್ತಿದೆ.

ಸರಸ್ವತಿಪುರಂನಲ್ಲಿರುವ ಆಧಾರ್ ಸೇವಾ ಕೇಂದ್ರ ಮಾರ್ಚ್‍ನಲ್ಲಿ ನೂತನವಾಗಿ ಕಾರ್ಯಾರಂಭ ಮಾಡಿತ್ತು. ಕೇವಲ ನಾಲ್ಕೈದು ದಿನ ಮಾತ್ರ ಸಾರ್ವಜನಿಕರಿಗೆ ಸೇವೆ ನೀಡಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಬಂದ್ ಮಾಡಿಸಲಾಗಿತ್ತು. ಈ ಕೇಂದ್ರದಲ್ಲಿ ಒಟ್ಟು 8 ಆಧಾರ್ ಕಾರ್ಡ್ ಮಾಡುವ ಕಿಟ್ ಇದ್ದು, ಅವುಗಳಲ್ಲಿ ಶೇ.33 ರಷ್ಟು ಸಿಬ್ಬಂದಿ ಬಳಸಿಕೊಳ್ಳಲು ಸೂಚನೆ ಇರುವು ದರಿಂದ ಕೇವಲ 4 ಕಿಟ್ ಬಳಸಲಾಗುತ್ತಿದೆ. ಇದರಿಂದ ಈ ಕೇಂದ್ರದಲ್ಲಿ ದಿನಕ್ಕೆ 125 ಮಂದಿಗೆ ಆಧಾರ್ ಮಾಡಿಕೊಡುವ ಸೌಲಭ್ಯ ದೊರೆಯಲಿದೆ.

ವಿಜಯನಗರದಲ್ಲಿರುವ ಆಧಾರ್ ಸೇವಾ ಕೇಂದ್ರ ದಲ್ಲಿ 16 ಯುನಿಟ್‍ಗಳಿದ್ದು, ಶೇ.50ರಷ್ಟು ಸಿಬ್ಬಂದಿ ಬಳಿಸಿ 10 ಯುನಿಟ್ ಮಾತ್ರ ಬಳಸಲಾಗುತ್ತಿದೆ. ಇದರಿಂದ ಈ ಕೇಂದ್ರದಲ್ಲಿ ದಿನಕ್ಕೆ 400 ಮಂದಿಗೆ ಮಾತ್ರ ಸೇವೆ ಒದಗಿಸಲಾಗುತ್ತದೆ. ಈ ಹಿಂದೆ ಈ ಕೇಂದ್ರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಆಧಾರ್ ಸೇವೆ ದೊರೆಯುತ್ತಿತ್ತು.

ಪ್ರತಿದಿನ ಎರಡೂ ಕೇಂದ್ರವು ಬೆಳಿಗ್ಗೆ 9ಕ್ಕೆ ತೆರೆಯ ಲಿದೆ. ಬೆ.9.40ರಿಂದ ಸಂಜೆ 5.30ವರೆಗೆ ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಸೇವೆ ಲಭ್ಯ ವಾಗಲಿದೆ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಕಚೇರಿ ಮುಚ್ಚುವಾಗ ಇಡೀ ಕಚೇರಿಯನ್ನೇ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಅಲ್ಲದೆ ಸರದಿಯಲ್ಲಿ ಅರ್ಜಿ ದಾರರು ಕಾಯುವ ಸ್ಥಳ ಹಾಗೂ ನೋಂದಣಿ ಮಾಡಿ ಕೊಳ್ಳುವ ಚೇರ್‍ನ್ನು ಸ್ಯಾನಿಟೈಸೇಷನ್ ಮಾಡಲಾಗು ತ್ತದೆ. ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಬಾಕ್ಸ್ ಬರೆಯಲಾಗಿದೆ. ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್‍ನಿಂದ ಕೈ ಶುದ್ಧಗೊಳಿಸಿದ ನಂತರ ಒಳಗೆ ಬಿಡಲಾಗುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಬಂದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸರಸ್ವತಿಪುರಂ ಕೇಂದ್ರ ದಲ್ಲಿ ಆಪಾಯ್ಟ್‍ಮೆಂಟ್ ಪಡೆಯಲು ask1.uidai. gov.in, ವಿಜಯನಗರದ ಸೇವಾಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಲು ask2.uidai. gov.in ಸಂಪರ್ಕಿ ಸಬಹುದಾಗಿದೆ. ಪ್ರತಿಯೊಬ್ಬ ಅರ್ಜಿದಾರರು ಡಿವೈಸ್ ಬಳಸಿದ ನಂತರ ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಸಿಬ್ಬಂದಿಗೆ ಮಾಸ್ಕ್, ಗ್ಲೌಸ್, ಫೇಸ್ ಕವರ್(ಶೀಲ್ಡ್) ನೀಡಲಾಗಿದೆ. ಎರಡೂ ಕೇಂದ್ರಗಳ ಮ್ಯಾನೇಜರ್ ಆಗಿ ಕರ್ನಲ್ ಕೃಷ್ಣಪ್ರಸಾದ್ ಕಾರ್ಯನಿರ್ವಹಿಸು ತ್ತಿದ್ದು, ಚೇತನ್ ಹಾಗೂ ಪ್ರವೀಣ್ ಆಪರೇಷನ್ ಮ್ಯಾನೇಜರ್ ಕಾರ್ಯ ನಿರ್ವಹಿಸುತ್ತಿದ್ದಾರೆ.