ಚಾಮರಾಜನಗರ ಸಬ್ ರಿಜಿಸ್ಟರ್ ಕಚೇರಿಯ ಮೇಲೆ ಎಸಿಬಿ ದಾಳಿ ಪ್ರಕರಣ

ಉಪನೋಂದಣಾಧಿಕಾರಿ ಸೇರಿ 8 ಮಂದಿಗೆ ನೋಟೀಸ್
ಚಾಮರಾಜನಗರ: ನಗರದ ಉಪ ನೋಂದಣಾಧಿಕಾರಿಗಳ ಕಚೇರಿ (ಸಬ್ ರಿಜಿಸ್ಟರ್ ಆಫೀಸ್)ಮೇಲೆ ಶುಕ್ರವಾರ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು (ಎಸಿಬಿ) ದಾಳಿ ನಡೆಸಿ ಮಧ್ಯ ರಾತ್ರಿಯವರೆಗೂ ಕಡತಗಳ ಪರಿಶೀಲನೆ ನಡೆಸಿದರು. ಈ ವೇಳೆ ಕಚೇರಿಯಲ್ಲಿ ಹೆಚ್ಚುವರಿ ಹಣ ದೊರೆತ ಕಾರಣ ಉಪನೋಂದಣಾಧಿಕಾರಿ ಗೀತಾ ಸೇರಿದಂತೆ 8 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ನೋಟೀಸ್ ಜಾರಿಗೊಳಿಸಿದ್ದಾರೆ.

ನಗರದ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ದಾಖ ಲಾತಿ ರಿಜಿಸ್ಟರ್ ಮಾಡಿಸಲು, ವಿವಾಹ ನೋಂದಣಿ ಮಾಡಿಕೊಡಲು, ಸಾಲದ ರಿಜಿಸ್ಟರ್ ಮಾಡಲು ಸೇರಿದಂತೆ ವಿವಿಧ ದಾಖಲಾತಿಗಳಿಗೆ ಸಾರ್ವಜನಿಕರಿಂದ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಶ್ರೀಕಾಂತ್ ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಇದರನ್ವಯ ದೂರು ದಾಖಲಿಸಿ ಕೊಂಡಿದ್ದ ಎಸಿಬಿ ಡಿವೈಎಸ್‍ಪಿ ಮೋಹನ್, ಇನ್‍ಸ್ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ಕಚೇರಿಗೆ ಶುಕ್ರವಾರ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಈ ವೇಳೆ ಎಸಿಬಿ ಅಧಿಕಾರಿಗಳು ರಶೀದಿ ಪುಸ್ತಕ ಪರಿಶೀಲಿಸಿದಾಗ 12,000ರೂ. ಸಂಗ್ರಹವಾಗಿತ್ತು. ಆದರೆ, ಕಚೇರಿಯಲ್ಲಿ 75,000 ರೂ. ನಗದು ಪತ್ತೆಯಾಗಿತ್ತು. ಇದರಲ್ಲಿ ದಾಖಲೆ ಯಿಲ್ಲದ 63,000 ರೂ. ಹೆಚ್ಚುವರಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಕಚೇಯ ಉಪನೋಂದಣಾಧಿಕಾರಿ ಗೀತಾ, ಡಿ ಗ್ರೂಪ್ ನೌಕರ ಮಹದೇವು, ಹೊರ ಗುತ್ತಿಗೆ ಆಧಾರದಡಿ ನೇಮಕವಾಗಿದ್ದ ಕಂಪ್ಯೂಟರ್ ಆಪರೇಟರ್ ಹೆಚ್.ಆರ್. ಪ್ರಶಾಂತ್ ಹಾಗೂ ವೀಣಾ, ಪತ್ರ ಬರಹಗಾರರಾದ ಸುಬ್ರಮಣ್ಯ, ಶ್ಯಾಮ್, ರಾಜು, ಮಹದೇವಯ್ಯ ಅವರ ವಿರುದ್ಧ ದೂರು ದಾಖಲಾಗಿದ್ದು, ಎಲ್ಲರಿಗೂ ನೋಟೀಸ್ ಜಾರಿ ಗೊಳಿಸಲಾಗಿದೆ ಎಂದು ಎಸಿಬಿ ಡಿವೈಎಸ್‍ಪಿ ಮೋಹನ್ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.