ಮೈಸೂರು ಪಾಲಿಕೆ ವಲಯ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಮೈಸೂರು, ಆ.26 (ಆರ್‍ಕೆ)-ಬುಧವಾರ ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳ ತಂಡ ಮೈಸೂರು ಮಹಾನಗರ ಪಾಲಿಕೆ ವಲಯ ಅಧಿಕಾರಿ ಯೊಬ್ಬರ ಮನೆ ಮೇಲೆ ದಾಳಿ ನಡೆಸಿದೆ.

ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-6 (ಶೇಷಾದ್ರಿ ಅಯ್ಯರ್ ರಸ್ತೆಯ ವಿದ್ಯಾ ವರ್ಧಕ ಕಾಲೇಜು ಎದುರು)ರ ವಲಯ ಅಧಿಕಾರಿ ನಾಗರಾಜು ಅವರ ಕುವೆಂಪುನಗರ ಎಂ-ಬ್ಲಾಕ್ ಮನೆ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು,

1.4 ಕೆ.ಜಿ. ಚಿನ್ನ, 2 ಕೆ.ಜಿ. ಬೆಳ್ಳಿ ಆಭರಣ, 9 ಲಕ್ಷ ರೂ. ನಗದು ಸೇರಿದಂತೆ ಅಪಾರ ಸ್ಥಿರ, ಚರಾಸ್ತಿಗಳ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ವ್ಯಕ್ತಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಆದಾಯಕ್ಕಿಂತ ಹೆಚ್ಚು ಸಂಪತ್ತು ಗಳಿಕೆ ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರು ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ಅವರು ನಾಗರಾಜು ಮನೆ ಮೇಲೆ ದಾಳಿ ನಡೆಸಲು ನಿರ್ದೇಶನ ನೀಡಿದ್ದರು. ತುಮಕೂರು ಎಸಿಬಿ ಡಿವೈಎಸ್ಪಿ ಉಮಾಶಂಕರ್, ರಾಮನಗರ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಇನ್ಸ್‍ಪೆಕ್ಟರ್‍ಗಳಾದ ಚಂದ್ರಶೇಖರ್, ಲಕ್ಷ್ಮಿದೇವಿ, ಸತ್ಯನಾರಾಯಣ ಸೇರಿದಂತೆ 10 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ 6.30ರ ಸುಮಾರಿಗೆ ದಾಳಿ ಮಾಡಿದ ಅಧಿಕಾರಿಗಳು, ಶೋಧನಾ ಕಾರ್ಯಾಚರಣೆ ನಡೆಸಿದರು. ಕುವೆಂಪುನಗರದ ಎರಡಂತಸ್ತಿನ ಮನೆ, ಅಲ್ಲಿನ ವಾಣಿಜ್ಯ ಸಂಕೀರ್ಣ, ಮೈಸೂರಿನಲ್ಲಿ ಎರಡು ನಿವೇಶನ, ಮಾಗಡಿಯಲ್ಲಿ ಮನೆ, ರಾಮನಗರದಲ್ಲಿ ಒಂದು ನಿವೇಶನಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳೂ ಪತ್ತೆಯಾದವು ಎಂದು ಎಸಿಬಿ ಮೂಲಗಳು ತಿಳಿಸಿವೆ. ಏಕ ಕಾಲದಲ್ಲಿ ಎಸಿಬಿ ಅಧಿಕಾರಿಗಳು ಮಾಗಡಿ, ರಾಮನಗರ ಹಾಗೂ ತುಮಕೂರಿನ ಸಂಬಂಧಿಕರ ಮನೆ ಮೇಲೂ ದಾಳಿ ನಡೆಸಿದ್ದಾರೆ. ಇಂದು ಸಂಜೆ 4.30 ಗಂಟೆವರೆಗೂ ನಡೆದ ಪರಿಶೀಲನೆ ವೇಳೆ ನಾಗರಾಜು ಹಾಗೂ ಸಂಬಂ ಧಿಕರು ಮನೆಯಲ್ಲಿದ್ದರು ಎಂದು ಹೇಳಲಾಗಿದ್ದು, ಮೈಸೂರಿನಲ್ಲಿ ಮೈಸೂರಿನ ಎಸಿಬಿ ಇನ್ಸ್‍ಪೆಕ್ಟರ್ ಕರೀಂ ರಾವತರ್ ಹಾಗೂ ಸಿಬ್ಬಂದಿ ಪರಿಶೀಲನೆಗೆ ಸಹಕರಿಸಿದರು.