ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಂತರ ಮೈಸೂರಲ್ಲಿ ಯೋಗಕ್ಕೆವೇಗ!

ಮೈಸೂರು,ಜೂ.6(ಎಂಟಿವೈ)- ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರಲ್ಲಿ ಪ್ರತಿ ವರ್ಷ ಶೇ.20ರಷ್ಟು ಯೋಗಪಟುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮನೆ ಮನೆಯಲ್ಲೂ ಯೋಗಾಭ್ಯಾಸ ಮಾಡುವವರ ಸಂಖ್ಯೆ ಹೆಚ್ಚುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಹಲವು ಆರೋಗ್ಯ ಸಮಸ್ಯೆ ನಿವಾರಣೆಗೆ ಯೋಗವೇ ಮದ್ದಾಗಿರುವ ನಿಟ್ಟಿನಲ್ಲಿ ವಿದೇಶಿಗರು ಯೋಗಾಭ್ಯಾಸಕ್ಕೆ ಮುಗಿಬೀಳುತ್ತಿದ್ದಾರೆ. ಅದರಲ್ಲೂ 2014ರಲ್ಲಿ ವಿಶ್ವಸಂಸ್ಥೆ, ಜೂ.21ರಂದು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಮೈಸೂರು ಸೇರಿದಂತೆ ವಿವಿಧೆಡೆ ಯೋಗ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಯೋಗ ಶಿಕ್ಷಣ ಸಂಸ್ಥೆಗಳ ಉತ್ಸಾಹ ಇಮ್ಮಡಿಗೊಳಿಸಿದೆ. 8 ವರ್ಷದ ಹಿಂದೆ ಅಂದಾಜು 10 ಸಾವಿರ ಮಂದಿ ದಿನನಿತ್ಯ ಯೋಗಾಭ್ಯಾಸ ಮಾಡುತ್ತಿ ದ್ದರು. ಈಗ ಅವರ ಸಂಖ್ಯೆ 75 ಸಾವಿರಕ್ಕೆ ಏರಿಕೆ ಕಂಡಿದೆ.

ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಹಾಗೂ ಜಿಎಸ್‍ಎಸ್ ಫೌಂಡೇಷನ್ ಮುಖ್ಯಸ್ಥ ಶ್ರೀಹರಿ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, 8 ವರ್ಷದ ಹಿಂದೆ ಅಂತರ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಆರಂಭಿಸಿ ದಂದಿನಿಂದ ಯೋಗಕ್ಕೆ ವೇಗ ಬಂದಿದೆ. ಯೋಗ ಮಾಡು ವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರೊಂದಿಗೆ ಔಪಚಾರಿಕ ಯೋಗ ತರಬೇತುದಾರರ ಸಂಖ್ಯೆ ಹೆಚ್ಚಾಗಿದೆ. ಯೋಗಾ ಭ್ಯಾಸ ಮಾಡುತ್ತಲೇ ಕಲಿತವರು ಇಂದು ಯೋಗ ಶಿಕ್ಷಣ ನೀಡುತ್ತಿದ್ದಾರೆ. ಇದರೊಂದಿಗೆ ಯೋಗ ಕೋರ್ಸ್ ಮಾಡಿರು ವವರು ವಿವಿಧ ಯೋಗ ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಈ ಮೊದಲು 100ರಿಂದ120 ಯೋಗ ತರಬೇತುದಾರರು ಇರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಶಾಲೆಗಳಲ್ಲೂ ಯೋಗ ಕಲಿಸಲು ಮುಂದಾಗಿ ದ್ದಾರೆ. ಜಿಲ್ಲೆಯಲ್ಲಿ 700ರಿಂದ 800 ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ಯೋಗ ಕಲಿಸಲಾಗುತ್ತಿದೆ.

ಪ್ರತಿ ಶಾಲೆಯಲ್ಲಿ ಕನಿಷ್ಠ ಎರಡರಿಂದ ಮೂವರು ಯೋಗ ಶಿಕ್ಷಕರಿದ್ದಾರೆ. 450ಕ್ಕೂ ಹೆಚ್ಚು ಶಾಲೆಗಳಲ್ಲಿ ಖಾಯಂ ಆಗಿ ಯೋಗ ಶಿಕ್ಷಕರನ್ನು ಹೊಂದಿವೆ. 400ಕ್ಕೂ ಅಧಿಕ ಜಿಮ್‍ಗಳಲ್ಲೂ ಯೋಗ ಕಲಿಸಲಾಗುತ್ತಿದೆ ಎಂದು ತಿಳಿಸಿದರು.

ಮೈಸೂರು ಯೋಗ ಒಕ್ಕೂಟವು 250ಕ್ಕೂ ಹೆಚ್ಚು ಸಂಸ್ಥೆಗಳು ಸದಸ್ಯತ್ವ ಪಡೆದಿವೆ. ಇದರೊಂದಿಗೆ ತಮ್ಮ ಅನುಭವದಲ್ಲಿ ಯೋಗ ಕಲಿಸುತ್ತಿರುವವರಿಂದಲೂ ಯೋಗ ವ್ಯಾಪ್ತಿ ಹೆಚ್ಚಾಗುತ್ತಿದೆ. ಅಂತರರಾಷ್ಟ್ರೀಯ ಯೋಗ ದಿನದ ಮೊದಲ ವರ್ಷ 10 ಸಾವಿರ ಮಂದಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಆ ನಂತರ ಅದರ ಸಂಖ್ಯೆ 55 ಸಾವಿರಕ್ಕೆ ಹೆಚ್ಚಳವಾಯಿತು. ಪ್ರಸ್ತುತ ಯೋಗಾಭ್ಯಾಸ ಮಾಡುವವರ ಸಂಖ್ಯೆ ಲಕ್ಷದ ಗಡಿಯನ್ನೂ ದಾಟಿದೆ. ಅದರಲ್ಲಿ ಪ್ರತಿದಿನ 75 ಸಾವಿರ ಮಂದಿ ಯೋಗಾ ಭ್ಯಾಸ ಮಾಡುತ್ತಿರುವುದು ವಿಶೇಷ. ಕಳೆದ ವರ್ಷ, ಕೋವಿಡ್‍ನಿಂದಾಗಿ ಆನ್‍ಲೈನ್ ಮೂಲಕ ನಡೆಸಿದ ಯೋಗ ಪ್ರದರ್ಶನದಲ್ಲಿ ಲಕ್ಷಕ್ಕೂ ಹೆಚ್ಚು ಭಾಗವಹಿಸಿದ್ದರು ಎಂದರು.

ಮೈಸೂರಲ್ಲಿ ಯೋಗ ಶಿಕ್ಷಣ ನೀಡುವ ಪ್ರಮುಖ ಸಂಸ್ಥೆಗಳಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ, ಯೋಗ ಕ್ರೀಡಾ ಪ್ರತಿಷ್ಠಾನ, ಮೈಸೂರು ಯೋಗ ಒಕ್ಕೂಟ, ಭಾರತ್ ಸ್ವಾಭಿಮಾನ್ ಟ್ರಸ್ಟ್, ಜಿಎಸ್‍ಎಸ್ ಯೋಗ, ಮೈಸೂರು ಯೋಗ ಅಸೋಸಿಯೇಷನ್, ಕೃಷ್ಣ ಪಟ್ಟಾಭಿ ಜೋಯಿಸ್ ಅಷ್ಟಾಂಗ ಸಂಸ್ಥೆ, ವೇದವ್ಯಾಸ ಯೋಗ ಫೌಂಡೇಶನ್, ಭರತ ಶೆಟ್ಟಿ ಪ್ರತಿಷ್ಠಾನ. ಮತ್ತು ನಿರ್ವಾಣ ಯೋಗ ಶಾಲೆ ಸೇರಿದಂತೆ ಇನ್ನು ಹಲವು ಯೋಗ ಶಿಕ್ಷಣ ಸಂಸ್ಥೆಗಳು ಯೋಗ ವಿಸ್ತಾರಕ್ಕೆ ಕಾರಣವಾಗಿವೆ ಎಂದು ತಿಳಿಸಿದರು.

ಕೋವಿಡ್ ಸೋಂಕಿನಿಂದಾಗಿ ವಿದೇಶಿ ವಿದ್ಯಾರ್ಥಿಗಳಿಗೆ ಯೋಗ ತರಗತಿಗಳ ಮೇಲೆ ಪರಿಣಾಮ ಬೀರಿತು. ವಿದೇಶದಿಂದ ಹೊಸದಾಗಿ ಯಾರೂ ಬಂದಿಲ್ಲ. ಈ ಹಿಂದೆ ದಾಖಲಾಗಿದ್ದವರಲ್ಲಿ ಕೆಲವರು ಮಾತ್ರ ಯೋಗ ಕಲಿಯುತ್ತಿದ್ದಾರೆ. ಮತ್ತಷ್ಟು ಮಂದಿ ಆನ್‍ಲೈನ್ ಮೂಲಕ ಕಲಿಯುತ್ತಿದ್ದಾರೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿಯಲ್ಲಿ ವಿದೇಶಿ ವಿದ್ಯಾರ್ಥಿಗಳ ಆಗಮನಕ್ಕೆ ಅವಕಾಶ ನೀಡಿದರೆ, ಇನ್ನಷ್ಟು ಮಂದಿ ಯೋಗ ಕಲಿಯಲು ಬರಲಿದ್ದಾರೆ. ಕೋವಿಡ್ ಸೋಂಕಿಗೂ ಮೊದಲು ಮೈಸೂರಿನಲ್ಲಿ ಕನಿಷ್ಠ 1,000 ದಿಂದ 1,500 ವಿದೇಶಿಗರು ಯೋಗ ಕಲಿಯುತ್ತಿದ್ದರು. ಕೋವಿಡ್ ಅವಧಿಯಲ್ಲಿ ದಾಖಲಾದ ಎಲ್ಲರಿಗೂ ಈಗ ತರಬೇತಿ ನೀಡಲಾಗುತ್ತಿದೆ ಎಂದರು.